ರಮಝಾನ್ ಮೊದಲ ದಿನ ಕಾಬಾದ ಮೇಲೆ ಸೌರ ಚಮತ್ಕಾರ !

Update: 2017-05-25 15:16 GMT

ಮಕ್ಕಾ, ಮೇ 24: ಈ ವರ್ಷದ ರಮಝಾನ್ ತಿಂಗಳ ಮೊದಲ ದಿನದಂದು ಖಗೋಳ ವಿಸ್ಮಯವೊಂದು ಜರಗಲಿದೆ ಎಂದು ಈಜಿಪ್ಟ್‌ನ ರಾಷ್ಟ್ರೀಯ ಖಗೋಳ ಮತ್ತು ಭೂಭೌತಶಾಸ್ತ್ರ ಸಂಶೋಧನಾ ಸಂಸ್ಥೆ ಘೋಷಿಸಿದೆ. ಅಂದು ಮಧ್ಯಾಹ್ನದ ಪ್ರಾರ್ಥನೆಯ ವೇಳೆ ಸ್ಥಳೀಯ ಮಕ್ಕಾ ಸಮಯ 12:18ಕ್ಕೆ ಸೂರ್ಯ ಕಾಬಾದ ಮೇಲಿನಿಂದ ಲಂಬವಾಗಿ ಮೇಲೇಳಲಿದೆ.

ಈ ಬಾರಿಯ ರಮಝಾನ್ ಶನಿವಾರ ಆರಂಭಗೊಳ್ಳುವ ನಿರೀಕ್ಷೆಯಿದೆ.

ಶನಿವಾರ ಮಧ್ಯಾಹ್ನ 12:18ಕ್ಕೆ ಕಾಬಾದ ನೆರಳು ಮರೆಯಾಗಲಿದೆ ಹಾಗೂ ಜಗತ್ತಿನ ಯಾವುದೇ ಸ್ಥಳದಲ್ಲಿ ಸೂರ್ಯನ ದಿಕ್ಕು ನಿಖರವಾಗಿ ‘ಕಿಬ್ಲಾ’ದ ದಿಕ್ಕಿನತ್ತ ಇರುತ್ತದೆ. ಕಿಬ್ಲಾ ಎಂದರೆ ಕಾಬಾಕ್ಕೆ ಮುಖ ಮಾಡಿ ಮುಸ್ಲಿಮರು ಪ್ರಾರ್ಥಿಸಬೇಕಾದ ದಿಕ್ಕು ಆಗಿರುತ್ತದೆ.

 ಝುಹುರ್ ಪ್ರಾರ್ಥನೆಯ ಸಮಯದಲ್ಲಿ ಕಾಬಾದಲ್ಲಿ ಸೂರ್ಯನ ಮೇಲೇರುವ ಕೋನ 89.93 ಡಿಗ್ರಿ (ಸರಿ ಸುಮಾರು 90 ಡಿಗ್ರಿ) ಆಗಿರುತ್ತದೆ ಎಂದು ಸಂಸ್ಥೆಯಲ್ಲಿ ಸೂರ್ಯನ ಚಟುವಟಿಕೆಗಳ ಸಂಶೋಧನೆಯ ಉಸ್ತುವಾರಿ ಹೊತ್ತಿರುವ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ವಿದ್ಯಮಾನ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ: ಮೊದಲನೆಯದು ಮೇ 27ರಂದು ಹಾಗೂ ಎರಡನೆಯದು ಜುಲೈ 15ರಂದು. ಈ ಬಾರಿಯ ವಿಶೇಷವೇನೆಂದರೆ, ಅದು ರಮಝಾನ್‌ನ ಪ್ರಥಮ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ಸಂಭವಿಸುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News