ಕೊಲ್ಲಿ ದೇಶಗಳಲ್ಲಿ ಇಂದು ರಮಝಾನ್ ಆರಂಭ

Update: 2017-05-26 15:03 GMT

ಜಿದ್ದಾ (ಸೌದಿ ಅರೇಬಿಯ), ಮೇ 26: ಮೇ 27 ಶನಿವಾರ ಪವಿತ್ರ ರಮಝಾನ್ ತಿಂಗಳ ಆರಂಭವಾಗಿರುತ್ತದೆ ಎಂದು ಸೌದಿ ಅರೇಬಿಯದ ಸುಪ್ರೀಂ ಕೋರ್ಟ್ ಗುರುವಾರ ಘೋಷಿಸಿದೆ.

ಗುರುವಾರ ಚಂದ್ರದರ್ಶನವಾಗಿಲ್ಲ, ಹಾಗಾಗಿ ಉಪವಾಸ ಶನಿವಾರ ಆರಂಭವಾಗುತ್ತದೆ ಎಂದು ಅದು ತಿಳಿಸಿದೆ.

‘‘ಇಡೀ ಇಸ್ಲಾಮಿಕ್ ಜಗತ್ತಿಗೆ ಗುರುವಾರ ಚಂದ್ರದರ್ಶನವಾಗಿಲ್ಲ’’ ಎಂದು ಅರಬ್ ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ವಿಜ್ಞಾನಗಳ ಒಕ್ಕೂಟದ ಸದಸ್ಯ ಖಗೋಳಶಾಸ್ತ್ರಜ್ಞ ಖಾಲಿದ್ ಅಲ್-ಝಾಕ್ ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದರು.

ಯುಎಇಯಲ್ಲೂ ಇಂದು ಆರಂಭ

ಯುಎಇಯಲ್ಲೂ ಶನಿವಾರ ರಮಝಾನ್ ತಿಂಗಳ ಮೊದಲ ದಿನವಾಗಿರುತ್ತದೆ. ಗುರುವಾರ ರಾತ್ರಿ ಚಂದ್ರನನ್ನು ಪತ್ತೆಹಚ್ಚಲು ಚಂದ್ರದರ್ಶನ ಸಮಿತಿಗೆ ಸಾಧ್ಯವಾಗಿಲ್ಲ.

ಕುವೈತ್, ಯಮನ್, ಬಹ್ರೈನ್, ಇರಾಕ್, ಲೆಬನಾನ್ ಮತ್ತು ಘಾನ ದೇಶಗಳೂ ಶನಿವಾರ ರಮಝಾನ್‌ನ ಮೊದಲ ದಿನವಾಗಿರುತ್ತದೆ ಎಂದು ಘೋಷಿಸಿವೆ.

ಜಗತ್ತಿನಾದ್ಯಂತದ 160 ಕೋಟಿಗೂ ಅಧಿಕ ಮುಸ್ಲಿಮರು ಪವಿತ್ರ ರಮಝಾನ್ ಮಾಸದಲ್ಲಿ ಬೆಳಗ್ಗಿನಿಂದ ಸಾಯಂಕಾಲದವರೆಗೆ ಉಪವಾಸ ಆಚರಿಸುತ್ತಾರೆ.

ಸೌದಿಯಿಂದ ಸಿರಿಯ ನಿರಾಶ್ರಿತರಿಗೆ 3 ಲಕ್ಷ ಇಫ್ತಾರ್ ಆಹಾರ

ಜಿದ್ದಾ, ಮೇ 26: ಟರ್ಕಿಯಲ್ಲಿರುವ ಸಿರಿಯ ನಿರಾಶ್ರಿತರು ಮತ್ತು ಸಿರಿಯದಲ್ಲೇ ನಿರಾಶ್ರಿತರಾಗಿರುವವರಿಗೆ ಮೂರು ಲಕ್ಷ ಇಫ್ತಾರ್ ಊಟಗಳನ್ನು ನೀಡಲು ‘ಸಿರಿಯದ ಸಹೋದರರಿಗೆ ನೆರವು ನೀಡುವ ಸೌದಿ ರಾಷ್ಟ್ರೀಯ ಅಭಿಯಾನ’ ಕಚೇರಿಯು ಟರ್ಕಿಯ ಮರ್ಕೆಝ್ ಮಾರ್ಕೆಟ್‌ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಇಫ್ತಾರ್ ಊಟದ ಒಟ್ಟು ವೌಲ್ಯವು 3 ಮಿಲಿಯ ಸೌದಿ ರಿಯಾಲ್ (5.16 ಕೋಟಿ ರೂಪಾಯಿ) ಆಗಿರುತ್ತದೆ.

ಲಭ್ಯವಿರುವ ಅತ್ಯುತ್ತಮ ಆಹಾರಗಳನ್ನು ನಿರ್ದಿಷ್ಟ ಮಾನದಂಡ ಮತ್ತು ವಿವರಗಳೊಂದಿಗೆ ಆಯ್ಕೆ ಮಾಡಲಾಗಿದೆ ಎಂದು ಟರ್ಕಿಯಲ್ಲಿರುವ ಅಭಿಯಾನ ಕಚೇರಿಯ ಮುಖ್ಯಸ್ಥ ಖಾಲಿದ್ ಅಲ್-ಸಲಾಮ ತಿಳಿಸಿದರು.

ಟರ್ಕಿಯಲ್ಲಿರುವ ಮತ್ತು ಸಿರಿಯ-ಟರ್ಕಿ ಗಡಿಯುದ್ದಕ್ಕೂ ಸಿರಿಯದ ಶಿಬಿರಗಳಲ್ಲಿ ಇರುವ ಸಿರಿಯ ನಿರಾಶ್ರಿತರಿಗೆ ತನ್ನ ಕಚೇರಿಯು ಆಹಾರ ಪೂರೈಸುವುದು. ಜೊತೆಗೆ ಸಿರಿಯದ ಅಲೆಪ್ಪೊ ಮತ್ತು ಇದ್ಲಿಬ್ ಪ್ರಾಂತಗಳಲ್ಲಿರುವ ನಿರಾಶ್ರಿತರಿಗೂ ಆಹಾರ ಪೂರೈಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News