ಯುಎಇ: 10 ಭಾರತೀಯರ ಮರಣ ದಂಡನೆ ರದ್ದು

Update: 2017-05-26 15:22 GMT

ದುಬೈ, ಮೇ 26: ಪಾಕಿಸ್ತಾನಿ ವ್ಯಕ್ತಿಯೋರ್ವನನ್ನು ಕೊಂದ ಪ್ರಕರಣದಲ್ಲಿ 10 ಭಾರತೀಯರ ಮರಣ ದಂಡನೆಯನ್ನು ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಗಿದ್ದು ಅವರು ಶೀಘ್ರವೇ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಶುಕ್ರವಾರ ಮಾಧ್ಯಮ ವರದಿಯೊಂದು ಹೇಳಿದೆ.

ಪಾಕಿಸ್ತಾನಿ ವ್ಯಕ್ತಿಯ ಕುಟುಂಬಕ್ಕೆ ದತ್ತಿ ಸಂಸ್ಥೆಯೊಂದು ಪರಿಹಾರ ನೀಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಪಂಜಾಬ್ ನಿವಾಸಿಗಳಾಗಿರುವ ಹತ್ತು ಮಂದಿಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮರಣ ದಂಡನೆ ಶಿಕ್ಷೆ ಘೋಷಿಸಲಾಗಿತ್ತು.

ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಿದ ಬಳಿಕ, ಅಲ್ ಐನ್ ಮೇಲ್ಮನವಿ ನ್ಯಾಯಾಲಯವು ಇಬ್ಬರಿಗೆ ಮೂರೂವರೆ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರೆ, ಇತರ ಮೂವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

 ಇತರ ಇಬ್ಬರು ಇನ್ನು ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ ಹಾಗೂ ಉಳಿದ ಮೂವರು ತಲಾ ಒಂದು ವರ್ಷ ಜೈಲು ಶಿಕ್ಷೆಗೆ ಒಳಗಾಗುವರು.

ಅವರು 2015 ಜುಲೈಯಿಂದ ಜೈಲಿನಲ್ಲಿದ್ದರು.

‘‘ಈ ನಿರ್ಧಾರ ತೆಗೆದುಕೊಂಡಿರುವುದಕ್ಕಾಗಿ ನಾವು ನ್ಯಾಯಾಲಯಕ್ಕೆ ಆಭಾರಿಯಾಗಿದ್ದೇವೆ ಹಾಗೂ ಈ ಯುವಕರನ್ನು ಕ್ಷಮಿಸಿದ ಮೃತನ ಕುಟುಂಬ ಸದಸ್ಯರಿಗೂ ಋಣಿಯಾಗಿದ್ದೇವೆ. 2015ರಲ್ಲಿ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ. ಈ ಯುವಕರು ಬಡ ಕುಟುಂಬದಿಂದ ಬಂದವರಾಗಿದ್ದು, ಅವರ ಕುಟುಂಬಕ್ಕೆ ಅವರ ಅವಶ್ಯಕತೆಯಿದೆ’’ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಸಮುದಾಯ ವ್ಯವಹಾರಗಳ ಪ್ರಥಮ ಕಾರ್ಯದರ್ಶಿಯಾಗಿರುವ ದಿನೇಶ್ ಕುಮಾರ್ ಹೇಳಿದರು.

 ಭಾರತೀಯ ದತ್ತಿ ಸಂಸ್ಥೆ ‘ಸರ್ಬತ್ ಡ ಭಾಲ ಚಾರಿಟೇಬಲ್ ಟ್ರಸ್ಟ್’ ಈಗಾಗಲೇ ಪರಿಹಾರವನ್ನು ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ಠೇವಣಿಯಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News