ಯುಎಇ : ಡ್ರೈವರ್ ಅಲಿ ಈಗ ಸ್ವಂತ ಕಂಪೆನಿಯ ಸಿಇಒ

Update: 2017-05-27 07:24 GMT

ಅಬುಧಾಬಿ,ಮೇ 27 : ಅಬುಧಾಬಿಯ ಕಂಪೆನಿಯೊಂದರಲ್ಲಿ ಒಂದೊಮ್ಮೆ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ಅಲಿ ವೇಲಮುಲ್ಲಿ ಇಂದು ಕಂಪೆನಿಯೊಂದರ ಸಿಇಒ. ನಂಬಲಸಾಧ್ಯವಾದರೂ ಇದು ನಿಜ. ಮದರಸಾಗೆ ಹೋಗಿ ಅಲ್ಲಿ ಅರಬಿಕ್ ಭಾಷೆ ಕಲಿಕೆ ಅಲಿಯ ಜೀವನದಲ್ಲಿ ಮಹತ್ತ ಬದಲಾವಣೆ ತಂದಿದೆಯಲ್ಲದೆ ಈಗ ಆತ ಮಿಸ್ಟರ್ ಕ್ಲೀನ್ ಪ್ರಾಪರ್ಟಿ ಮ್ಯಾನೇಜ್ಮೆಂಟ್ ಸಂಸ್ಥೆಯ ಒಡೆಯ.

ಅಲಿಯ ಯುಎಇ ಜೀವನ 1988ರಲ್ಲಿ ಆರಂಭವಾಗಿತ್ತು. ಈ ತಿಂಗಳು ಅವರು ಈ ದೇಶದಲ್ಲಿದ್ದು 29 ವರ್ಷ ಪೂರೈಸಿವೆ.

‘‘ನಾನು ಮೊದಲು ಅಜ್ಮಾನ್ ಗೆ ಆಗಮಿಸಿದ್ದೆ. ಅಲ್ಲಿ ನನ್ನ ಹುಟ್ಟೂರಿನ ಹಲವರು ಇದ್ದರು. ಎಲ್ಲರೂ ನನಗೆ ಚಾಲನಾ ಪರವಾನಗಿ ಪಡೆದು ಸೇಲ್ಸ್ ವಿಭಾಗದಲ್ಲಿ ನೌಕರಿ ಪಡೆಯಲು ಸಲಹೆ ನೀಡಿದರು. ಚಾಲನಾ ಪರವಾನಗಿ ಪಡೆಯುವುದು ನನ್ನ ಕನಸೆಂದು ತಿಳಿದು ನಾನು ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ಆರಂಭಿಸಿದೆ. ನಂತರ ನನಗೆ ಲೈಸನ್ಸ್ ಸಿಕ್ಕ ನಂತರ ನಾನು ಅಲ್ ಅಯ್ನ್ ಗೆ ಹೋಗಿ ಅಲ್ಲಿ ನನ್ನ ಹಿರಿಯ ಸಹೋದರ ಕೆಲಸ ಮಾಡುತ್ತಿದ್ದ ಕಂಪೆನಿ ಸೇರಿದೆ. ನಂತರ ನನಗೆ ಮದುವೆಯಾಯಿತು,. ಆರು ತಿಂಗಳು ಕೆಲಸ ಮಾಡಿ ಉಳಿದ ಆರು ತಿಂಗಳು ಕೇರಳದಲ್ಲಿ ಕಳೆಯುತ್ತಿದ್ದೆ. ನನ್ನಲ್ಲಿ ಚಾಲನಾ ಪರವಾನಗಿ ಇದ್ದುದರಿಂದ ಸುಲಭವಾಗಿ ಕೆಲಸ ದೊರೆಯುತ್ತಿತ್ತು,’’ ಎಂದು ಅಲಿ ನೆನಪಿನ ಸುರುಳಿ ಬಿಚ್ಚುತ್ತಾರೆ.

1996ರಲ್ಲಿ ಸರಕಾರಿ ಆಮ್ನೆಸ್ಟಿ ಅವರ ಜೀವನದಲ್ಲಿ ಹೊಸ ತಿರುವು ತಂದಿತು.

‘‘ನಾನು ಖಾಸಗಿ ವೀಸಾದಿಂದ ಸ್ಥಳೀಯ ಪ್ರವರ್ತಕರ ಮೂಲಕ ಕೆಲಸ ಮಾಡಬೇಕಾಯಿತು,’’ ಎಂದು ಹೇಳುತ್ತಾರೆ ಅಲಿ. ಮುಂದೆ ಗೆಳೆಯರೊಬ್ಬರ ಮುಖಾಂತರ ಖಾಸಗಿ ಪ್ರಾಪರ್ಟಿ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಚಾಲಕರಾಗಿ ಸೇರಿದರು. ಅಲ್ಲಿ ಅವರು ಒಂದು ಸಂಜೆ ಅರಬಿಕ್ ಪತ್ರಿಕೆ ಓದುತಿದ್ದುದನ್ನು ನೋಡಿದ ಅವರ ಬಾಸ್ ಅವರಿಗೆ ಅರಬಿಕ್ ಭಾಷೆ ಗೊತ್ತಿದೆಯೆಂದೇಕೆ ಹೇಳಲಿಲ್ಲ ಎಂದು ಹೇಳಿ ಅವರನ್ನು ಪಿಆರ್‌ಒ ಹುದ್ದೆಗೇರಿಸಿದರು. ಮದರಸಾದಲ್ಲಿ ಕಲಿತ ಅರಬಿಕ್ ಭಾಷೆ ಸಹಾಯ ಮಾಡಿತ್ತು.

ತಮ್ಮ ಅನುಭವದ ಆಧಾರದಲ್ಲಿ ಅವರು 2011ರಲ್ಲಿ ಮಿಸ್ಟರ್ ಡ್ರೈ ಕ್ಲೀನಿಂಗ್ ಸಂಸ್ಥೆ ಆರಂಭಿಸಿದರು. ಅದು ಆಗಲೇ ಒಂದು ಸ್ಥಾಪಿತ ಸಂಸ್ಥೆಯಾಗಿತ್ತು ಹಾಗೂ ಅದನ್ನು ಸ್ಥಳೀಯರೊಬ್ಬರಿಂದ ಅವರು ಖರೀದಿಸಿದ್ದರು. 1 ಮಿಲಿಯನ್ ಧಿರಮ್ ಪಾವತಿಸಿ ಬ್ರ್ಯಾಂಡ್ ಹೆಸರು ಪಡೆದ ಅವರು ಒಟ್ಟು ಸುಮಾರು 2 ಮಿಲಿಯನ್ ಧಿರಮ್ ಪಾವತಿಸಿ ಕಂಪೆನಿಯ ಎಲ್ಲಾ ಸೊತ್ತುಗಳನ್ನು ತಮ್ಮದಾಗಿಸಿಕೊಂಡರು ಇದಕ್ಕಾಗ ತಮ್ಮ ಹುಟ್ಟೂರಲ್ಲಿದ್ದ ಮನೆಯನ್ನೂ ಮಾರಿದರು. ಒಟ್ಟು 10 ಮಳಿಗೆಗಳಿಂದ ಆರಂಭವಾದ ಅವರ ಉದ್ಯಮದಲ್ಲಿ ಈಗ 13 ಮಳಿಗೆಗಳು ಹಾಗೂ 100 ಉದ್ಯೋಗಿಗಳಿದ್ದಾರೆ. ಇತ್ತೀಚೆಗೆ ಅವರು ಕಾರ್ ವಾಶ್ ಬಿಸಿನೆಸ್ ಕೂಡ ಆರಂಭಿಸಿದ್ದಾರೆ.

ಈತನ್ಮಧ್ಯೆ ಅವರು ತಮ್ಮ ಪದವಿಯನ್ನು ಪೂರೈಸಿದ್ದಾರೆ ಹಾಗೂ ಬ್ರಿಟಿಷ್ ಕೌನ್ಸಿಲ್ ನ 28 ತಿಂಗಳು ಅವಧಿಯ ಭಾಷಾ ಕೋರ್ಸ್ ಗೆ ಸೇರಿದ್ದಾರೆ. ಇದೀಗ ಅವರು ಗ್ಲೋಬರ್ ಎಂಬಿಎ ಕೋರ್ಸಿಗೂ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News