×
Ad

ದುಬೈಯ ಬೀದಿಗಿಳಿದ ರೋಬಟ್ ಪೊಲೀಸ್

Update: 2017-06-01 19:40 IST

ದುಬೈ, ಜೂ. 1: ಪೊಲೀಸರಿಗೆ ಬೇಕಾಗಿರುವ ಖೂಳರನ್ನು ಗುರುತಿಸಲು ಮತ್ತು ಪುರಾವೆ ಸಂಗ್ರಹಿಸಲು ದುಬೈ ಪೊಲೀಸ್ ಪಡೆಗೆ ಹೊಸ ಪೊಲೀಸ್ ಅಧಿಕಾರಿಯೊಬ್ಬರು ಸೇರ್ಪಡೆಗೊಂಡಿದ್ದಾರೆ.

ಆದರೆ ಅವರು ಮಾನವರಲ್ಲ, ರೋಬಟ್ (ಯಂತ್ರ) ಪೊಲೀಸ್. ಅವರು ನಗರದ ನಿಬಿಡ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾರೆ.
 ಕೆಲವು ಮಾನವ ಪೊಲೀಸ್ ಅಧಿಕಾರಿಗಳ ಜಾಗದಲ್ಲಿ ಯಂತ್ರಗಳನ್ನು ನಿಯೋಜಿಸುವ ಸರಕಾರದ ಯೋಜನೆಯ ಭಾಗವಾಗಿ ಈ ಸೇರ್ಪಡೆ ನಡೆದಿದೆ.
‘ರೋಬೊಕಾಪ್’ ಪ್ರಯೋಗ ಯಶಸ್ವಿಯಾದರೆ, 2030ರ ವೇಳೆಗೆ ಗಸ್ತು ಪೊಲೀಸ್ ಪಡೆಯಲ್ಲಿ 25 ಶೇಕಡದಷ್ಟು ರೋಬಟ್ ಪೊಲೀಸರಿರುತ್ತಾರೆ ಎಂದು ದುಬೈ ಪೊಲೀಸರು ಹೇಳುತ್ತಾರೆ.

ದುಬೈ ಪೊಲೀಸ್ ಸಮವಸ್ತ್ರದಲ್ಲಿರುವ ಈ ಮಾನವ ಗಾತ್ರದ ರೋಬೊಕಾಪ್ ಕೈಕುಲುಕಬಲ್ಲದು ಮತ್ತು ಸೇನಾ ಸಲ್ಯೂಟ್ ಹೊಡೆಯಬಲ್ಲದು. ದುಬೈಯಲ್ಲಿ 2020ರಲ್ಲಿ ನಡೆಯಲಿರುವ ಬೃಹತ್ ವಸ್ತುಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಸೇವೆಗಳು ಮತ್ತು ಭದ್ರತೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸುವ ಸರಕಾರಿ ಯೋಜನೆಯ ಭಾಗವಾಗಿ ಈ ಪ್ರಯೋಗ ನಡೆಸಲಾಗಿದೆ.

‘‘ಈ ಮಾದರಿಯ ಪೊಲೀಸರು ದಿನದ 24 ಗಂಟೆಯೂ ಕೆಲಸ ಮಾಡಬಲ್ಲರು. ಅವರು ರಜೆ, ಅನಾರೋಗ್ಯ ರಜೆ ಅಥವಾ ಬಾಣಂತಿ ರಜೆ ಕೇಳುವುದಿಲ್ಲ’’ ಎಂದು ದುಬೈ ಪೊಲೀಸ್‌ನ ಸ್ಮಾರ್ಟ್ ಸರ್ವಿಸಸ್ ಇಲಾಖೆಯ ಮಹಾ ನಿರ್ದೇಶಕ ಬ್ರಿಗೇಡಿಯರ್ ಖಾಲಿದ್ ನಾಸಿರ್ ಅಲ್ ರಝೂಕಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News