ಕುವೈತ್ ಆಮಿರ್‌ರಿಂದ ಯುಎಇ ಅಧಿಕಾರಿಗಳ ಭೇಟಿ
ದುಬೈ, ಜೂ. 8: ಅರಬ್ ಜಗತ್ತಿನಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರವೊಂದನ್ನು ಕಂಡುಹಿಡಿಯುವ ಪ್ರಯತ್ನವಾಗಿ ಕುವೈತ್ ಆಮಿರ್ ಶೇಖ್ ಸಬಾ ಅಲ್-ಅಹ್ಮದ್ ಅಲ್-ಸಬಾ ಬುಧವಾರ ಯುಎಇ ಅಧಿಕಾರಿಗಳನ್ನು ಭೇಟಿಯಾದರು.
ಇದಕ್ಕೂ ಒಂದು ದಿನ ಮುಂಚೆ ಅವರು ಸೌದಿ ಅರೇಬಿಯದ ದೊರೆಯೊಂದಿಗೆ ಮಾತುಕತೆ ನಡೆಸಿದ್ದರು.
ದುಬೈಯ ಆಡಳಿತಗಾರ ಹಾಗೂ ಯುಎಇಯ ಉಪಾಧ್ಯಕ್ಷ ಹಾಗೂ ಪ್ರಧಾನಿಯಾಗಿರುವ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ಮತ್ತು ಅಬುಧಾಬಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೇದ್ ಅಲ್-ನಹ್ಯನ್ ಜೊತೆ ಕುವೈತ್ ಆಮಿರ್ ಮಾತುಕತೆಗಳನ್ನು ನಡೆಸಿದರು ಎಂದು ಯುಎಇಯ ಸರಕಾರಿ ಸುದ್ದಿ ಸಂಸ್ಥೆ ಡಬ್ಲುಎಎಂ ವರದಿ ಮಾಡಿದೆ.
ಯುಎಇ ವಿದೇಶ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯೇದ್ ಅಲ್-ನಹ್ಯನ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕತರ್ ಆಮಿರ್ ಜೊತೆ ಸಂಧಾನ
ಕುವೈತ್ ಆಮಿರ್ ಶೇಖ್ ಸಬಾ ಅಲ್-ಅಹ್ಮದ್ ಅಲ್-ಸಬಾ ಬುಧವಾರ ರಾತ್ರಿ ಕತರ್ ಆಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಜೊತೆ ಕೊಲ್ಲಿ ಬಿಕ್ಕಟ್ಟಿಗೆ ಸಂಬಂಧಿಸಿ ಮಾತುಕತೆ ನಡೆಸಿದರು.
ಕೊಲ್ಲಿ ದೇಶಗಳ ನಡುವಿನ ಸಾಮಾನ್ಯ ಸಂಬಂಧವನ್ನು ಹೇಗೆ ಮರುಸ್ಥಾಪಿಸಬಹುದು ಎಂಬ ಬಗ್ಗೆ ಇಬ್ಬರು ನಾಯಕರು ಮಾತುಕತೆ ನಡೆಸಿದರು ಎಂದು ಕತರ್ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.