ಕತರ್ ನೆರವಿಗೆ ಧಾವಿಸಿದ ಇರಾನ್: ಐದು ವಿಮಾನಗಳಲ್ಲಿ ಆಹಾರ ರವಾನೆ

Update: 2017-06-11 11:57 GMT

ಟೆಹ್ರಾನ್, ಜೂ.11: ಗಲ್ಫ್ ರಾಷ್ಟ್ರಗಳು ಕತರ್‌ನೊಂದಿಗೆ ವಾಯು ಮತ್ತು ಇತರ ಸಾರಿಗೆ ಸಂಪರ್ಕ ಕಡಿತಗೊಳಿಸಿದ ಕೆಲವೇ ದಿನಗಳಲ್ಲಿ ಇರಾನ್ ಕತಾರ್‌ನ ನೆರವಿಗೆ ಧಾವಿಸಿದ್ದು ಐದು ವಿಮಾನಗಳ ಮೂಲಕ ಆಹಾರ ಪದಾರ್ಥ ರವಾನಿಸಿದೆ.

   ಇದುವರೆಗೆ ತರಕಾರಿ ಮತ್ತು ಹಣ್ಣುಹಂಪಲು ತುಂಬಿಕೊಂಡಿದ್ದ ಐದು ವಿಮಾನಗಳನ್ನು ಕತರ್‌ಗೆ ರವಾನಿಸಲಾಗಿದೆ. ಪ್ರತಿಯೊಂದು ವಿಮಾನದಲ್ಲೂ 90 ಟನ್‌ಗಳಷ್ಟು ಸರಕು ತುಂಬಿಸಲಾಗಿದೆ. ಇನ್ನೊಂದು ವಿಮಾನವನ್ನು ರವಿವಾರ ರವಾನಿಸಲಾಗುವುದು ಎಂದು ಇರಾನ್ ವಾಯುಯಾನ ಸಂಸ್ಥೆಯ ವಕ್ತಾರ ಶಹ್‌ರೋಖ್ ನೌಶಾಬಾದಿ ಸುದ್ದಿಸಂಸ್ಥೆಗೆ ತಿಳಿಸಿದರು.

ಕತರ್ ಎಲ್ಲಿಯವರೆಗೆ ಬೇಡಿಕೆ ಸಲ್ಲಿಸುತ್ತದೋ ಅಲ್ಲಿಯವರೆಗೂ ನಾವು ಆಹಾರವನ್ನು ರವಾನಿಸುತ್ತೇವೆ ಎಂದು ನೌಶಾಬಾದಿ ತಿಳಿಸಿದ್ದಾರೆ. ಈ ಕ್ರಮ ರಫ್ತು ವ್ಯವಹಾರದ ಒಂದು ಭಾಗವೇ ಅಥವಾ ಕತರ್‌ಗೆ ನೀಡುವ ನೆರವೇ ಎಂಬುದರ ಬಗ್ಗೆ ಅವರು ಪ್ರಸ್ತಾಪಿಸಲಿಲ್ಲ.

ಅಲ್ಲದೆ 350 ಟನ್ ಆಹಾರ ಸಾಮಾಗ್ರಿ ಹೊತ್ತಿರುವ ನೌಕೆಗಳು ಇರಾನ್ ಬಂದರಿನಿಂದ ಕತರ್‌ನತ್ತ ಪ್ರಯಾಣಿಸಲು ಸಜ್ಜಾಗಿ ನಿಂತಿವೆ ಎಂದು ಸ್ಥಳೀಯ ಅಧಿಕಾರಿಯನ್ನು ಉದ್ದರಿಸಿ ಇರಾನಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

     ಕತರ್ ದೇಶ ಭಯೋತ್ಪಾದಕರಿಗೆ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದ ಸೌದಿ ಅರೆಬಿಯ, ಬಹ್ರೈನ್, ಯುಎಇ, ಈಜಿಪ್ಟ್ ಮತ್ತು ಯೆಮೆನ್ ದೇಶಗಳು ಕಳೆದ ಸೋಮವಾರದಿಂದ ಆ ದೇಶದೊಂದಿಗಿನ ಎಲ್ಲಾ ಸಂಬಂಧಗಳನ್ನೂ ಕಡಿದುಕೊಂಡಿರುವುದಾಗಿ ಪ್ರಕಟಿಸಿದ್ದವು.

ಆದರೆ ಇರಾನ್ ಮಾತ್ರ ಕತರ್ ನೆರವಿಗೆ ನಿಂತಿದ್ದು ಯಾವುದೇ ಭಿನ್ನಾಭಿಪ್ರಾಯ ದೂರಗೊಳಿಸಲು ಮಾತುಕತೆಗೆ ಮುಂದಾಗುವಂತೆ ಕರೆ ನೀಡಿತ್ತು. ಅಲ್ಲದೆ, ತನ್ನ ವಾಯುಕ್ಷೇತ್ರದ ಮೂಲಕ ಸಾಗಲು ಹೆಚ್ಚುವರಿಯಾಗಿ 100ಕ್ಕೂ ಹೆಚ್ಚು ಕತರ್ ವಿಮಾನಗಳಿಗೆ ಅವಕಾಶ ಕಲ್ಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News