ಕತರ್ ಪ್ರಜೆಗಳಿಗೆ ಮಕ್ಕಾ ಪ್ರವೇಶ ನಿಷೇಧಿಸಿಲ್ಲ: ಸೌದಿ ಆರೇಬಿಯ ಸ್ಪಷ್ಟನೆ

Update: 2017-06-12 14:58 GMT

ರಿಯಾದ್,ಜೂ.12: ಪವಿತ್ರ ಮಕ್ಕಾ ನಗರಕ್ಕೆ ಕತರ್ ಪ್ರಜೆಗಳ ಪ್ರವೇಶವನ್ನು ನಿಷೇಧಿಸಿದ್ದೇನೆಂಬ ವರದಿಗಳನ್ನು ಸೌದಿ ಆರೇಬಿಯ ಸೋಮವಾರ ನಿರಾಕರಿಸಿದೆ.

 ಕತರ್‌ನಿಂದ ಮಕ್ಕಾ ಯಾತ್ರೆಗೆ ಆಗಮಿಸಿದ 206 ಮಂದಿಗೆ ಜೂನ್ 9ರಂದು ಸಲ್ವಾ ಗಡಿಯನ್ನು ದಾಟಲು ಅನುಮತಿ ನೀಡಲಾಗಿದೆಯೆಂದು ಸೌದಿ ಆರೇಬಿಯ ದೃಢಪಡಿಸಿರುವುದಾಗಿ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಕ್ಕಾ ಮದೀನಾದ ಮಸೀದಿಗಳನ್ನು ಸಂದರ್ಶಿಸುವ ಕತರ್ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳ ಯಾತ್ರಿಕರಿಗೆ ತಾನು ಸೇವೆಯನ್ನು ಒದಗಿಸುವುದಾಗಿ ಸೌದಿ ಆಡಳಿತವು ಇಂದು ಹೇಳಿಕೆಯೊಂದರಲ್ಲಿ ತಿಳಿಸಿದೆ. ಕತರ್ ಪ್ರಜೆಗಳಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆಯೆಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುದ್ದಿಗಳು, ಆಧಾರರಹಿತ ಆರೋಪಗಳೆಂದು ಸೌದಿ ಆಡಳಿತ ತಿಳಿಸಿದೆ.
ಪ್ರಸ್ತುತ ಸೌದಿಗೆ ಆಗಮಿಸಿರುವ ಕತರ್‌ನ ಎಲ್ಲಾ ಯಾತ್ರಿಕರಿಗೂ ಎಲ್ಲಾ ವಿಧದ ಸೌಕರ್ಯಗಳನ್ನು ಹಾಗೂ ಸೇವೆಗಳನ್ನು ಒದಗಿಸಲಾಗಿದೆಯೆಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದನೆಗೆ ಕತರ್ ಬೆಂಬಲ ನೀಡುತ್ತಿದೆಯೆಂದು ಆರೋಪಿಸಿ ಸೌದಿ ಆರೇಬಿಯ, ಬಹರೈನ್,ಯುಎಇ ಹಾಗೂ ಈಜಿಪ್ಟ್‌ಗಳು ಆ ದೇಶದ ಜೊತೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News