24 ವರ್ಷಗಳಿಂದ ಸೌದಿಯಲ್ಲಿ ತಲೆಮರೆಸಿಕೊಂಡಿದ್ದ ಭಾರತೀಯ ಶೀಘ್ರ ತವರಿಗೆ

Update: 2017-06-14 14:25 GMT

ಸೌದಿ ಅರೇಬಿಯಾ, ಜೂ.14: ಸುಮಾರು 24 ವರ್ಷಗಳಿಂದ ಸೌದಿ ಅರೇಬಿಯಾದ ಮರಳುಗಾಡಿನಲ್ಲಿ  ತಲೆಮರೆಸಿಕೊಂಡು ನೆಲೆಸಿದ್ದ ಭಾರತೀಯರೊಬ್ಬರು ಸೌದಿ ಸರಕಾರದ 90 ದಿನಗಳ ಕ್ಷಮಾದಾನ ಅವಧಿಯಲ್ಲಿ ಕೊನೆಗೂ ಭಾರತಕ್ಕೆ ಮರಳಲಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯ ಗಾನ ಪ್ರಕಾಶಂ 1994ರಲ್ಲಿ ಹೈಲ್ ಪ್ರಾಂತ್ಯಕ್ಕೆ ಕೃಷಿ ಕಾರ್ಮಿಕನಾಗಿ ಬಂದಿದ್ದರು, ಕೆಲಸಕ್ಕೆ ಸೇರಿ ಸುಮಾರು 6 ತಿಂಗಳುಗಳ ಕಾಲ ಅವರಿಗೆ ತಿಂಗಳಿಗೆ 100 ಸೌದಿ ರಿಯಾಲ್ ನೀಡಲಾಗುತ್ತಿತ್ತು. ನಂತರ ಬೇರೊಬ್ಬರ ಜೊತೆ ಅವರು ಕೆಲಸಕ್ಕೆ ಸೇರಿದರು. ನಂತರ ಆರಂಭವಾದ ಪ್ರಕಾಶಂ ಅವರ ಸೌದಿ ಜೀವನ ಅವರು ಭಾರತಕ್ಕೆ ಹಿಂದಿರುಗದಷ್ಟು ಕಷ್ಟಕರವಾಗಿತ್ತು. 24 ವರ್ಷಗಳಿಂದ ಒಂದು ಬಾರಿಯೂ ಅವರು ಮನೆಗೆ ಹಿಂದಿರುಗಿರಲಿಲ್ಲ ಎಂದು ಸೌದಿ ಗ್ಯಾಝೆಟ್ ವರದಿ ಮಾಡಿದೆ.

“ಮೂವರು ಮಾಲಕರಲ್ಲಿ ನನ್ನ ಪ್ರಾಯೋಜಕರು ಯಾರು ಎಂಬುದೇ ನನಗೆ ತಿಳಿಯಲಿಲ್ಲ. ಅವರ್ಯಾರೂ ನನಗೆ ಸಂಬಳ ನೀಡಲಿಲ್ಲ. ಆದ್ದರಿಂದ ನಾನು ಅಲ್ಲಿಂದ ಪರಾರಿಯಾಗಿ ಅಕ್ರಮವಾಗಿ ಸೌದಿಯಲ್ಲಿ ನೆಲೆಸುವಂತಾಯಿತು” ಎಂದು ಪ್ರಕಾಶಂ ಹೇಳಿದ್ದಾರೆ,

“ನಾನು ಮನೆಯಿಂದ ಇಲ್ಲಿಗೆ ಆಗಮಿಸಿದ್ದ ಸಂದರ್ಭ ನನ್ನ ನಾಲ್ವರು ಪುತ್ರಿಯರು ಸಣ್ಣ ವಯಸ್ಸಿನವರಾಗಿದ್ದರು. ಈಗ ನಾನು ಮತ್ತೊಮ್ಮೆ ಹಿಂದಿರುಗಲಿದ್ದು, ಅದೇ ವಯಸ್ಸಿನ ಮೊಮ್ಮಕ್ಕಳಿದ್ದಾರೆ. ಸೌದಿ ಅರೇಬಿಯಾದಲ್ಲಿ ದುಡಿದು ಮೂವರು ಪುತ್ರಿಯರ ಮದುವೆ ಮಾಡಿಕೊಡಲು ಸಾಧ್ಯವಾಯಿತು. ನಾನು ಭಾರತದಿಂದ ಸೌದಿಗೆ ಕಾಲಿಟ್ಟ ನಂತರ ಆಧಾರ್ ಕಾರ್ಡ್, ವೋಟರ್ ಐಡಿ ಜಾರಿಗೆ ಬಂದಿದ್ದರಿಂದ ನನ್ನ ಬಳಿ ಅದ್ಯಾವುದೂ ಇಲ್ಲ. ನನಗೆ ಸ್ವಂತ ಮನೆಯೂ ಇಲ್ಲ” ಎಂದು ಪ್ರಕಾಶಂ ಹೇಳುತ್ತಾರೆ,

ಪ್ರಕಾಶಂ 2015ರಲ್ಲಿ ಕೊನೆಯ ಬಾರಿಗೆ ತನ್ನ ಪತ್ನಿಯಲ್ಲಿ ಮಾತನಾಡಿದ್ದರು. ಆ ಸಂದರ್ಭ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆನಂತರ ಅವರು ಪತ್ನಿಯೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಅದಾಗಿ ಒಂದು ವರ್ಷದ ಬಳಿಕ ಆಕೆ ಮೃತಪಟ್ಟಿದ್ದರು.

ಹೈಲ್ ಮೂಲದ ಸಾಮಾಜಿಕ ಕಾರ್ಯಕರ್ತ ಸರ್ಫುದ್ದೀನ್ ತಯ್ಯಿಲ್ ಸಹಾಯದಿಂದ ಭಾರತಕ್ಕೆ ಮರಳಲು ಬೇಕಾದ ಎಲ್ಲಾ ಕೆಲಸಗಳನ್ನು ಪ್ರಕಾಶಂ ಮುಗಿಸಿದ್ದಾರೆ. ಶೀಘ್ರವೇ ಅವರು ಭಾರತಕ್ಕೆ ಮರಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News