×
Ad

ಭಾರತೀಯ ವಿಮಾನಗಳು ದೋಹಾ ತಲುಪಲು ಯುಎಇ ವಾಯುಪ್ರದೇಶ ಬಳಕೆಗೆ ಅನುಮತಿ

Update: 2017-06-14 20:14 IST

ಅಬುಧಾಬಿ (ಯುಎಇ), ಜೂ. 14: ಇಂಡಿಯನ್ ಏರ್‌ಲೈನ್ಸ್ ವಿಮಾನಗಳು ಕತರ್ ರಾಜಧಾನಿ ದೋಹಾವನ್ನು ತಲುಪಲು ಇನ್ನು ಯುಎಇಯ ವಾಯುಪ್ರದೇಶವನ್ನು ಬಳಸಬಹುದಾಗಿದೆ ಎಂದು ಯುಎಇಗೆ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ಮಂಗಳವಾರ ತಿಳಿಸಿದರು.

ಭಾರತೀಯ ರಾಯಭಾರ ಕಚೇರಿಯ ಸಕಾಲಿಕ ಮಧ್ಯಪ್ರವೇಶದಿಂದ ಇದು ಸಾಧ್ಯವಾಯಿತು ಎಂದರು.

ಸೌದಿ ಅರೇಬಿಯ, ಬಹರೈನ್ ಮತ್ತು ಯುಎಇ ದೇಶಗಳು ಕತರ್ ವಿರುದ್ಧ ವಿಧಿಸಿರುವ ವಾಯು ಪ್ರದೇಶ ನಿರ್ಬಂಧದ ಹಿನ್ನೆಲೆಯಲ್ಲಿ, ಭಾರತದ ಪ್ರಮುಖ ಸ್ಥಳಗಳಿಂದ ಹೊರಟ ವಿಮಾನಗಳು ಒಂದು ಗಂಟೆಯಷ್ಟು ವಿಳಂಬವಾಗಿ ದೋಹಾವನ್ನು ತಲುಪುತ್ತಿದ್ದವು. ದೋಹಾ ತಲುಪಲು ಅವುಗಳು ಪಾಕಿಸ್ತಾನ ಮತ್ತು ಇರಾನ್‌ಗಳ ವಾಯುಪ್ರದೇಶವನ್ನು ಬಳಸಬೇಕಾಗಿತ್ತು.

‘‘ಕೇರಳದಿಂದ ಹೊರಡುವ ವಿಮಾನಗಳು 50 ನಿಮಿಷ ಮತ್ತು ಮುಂಬೈಯಿಂದ ಹೊರಟ ವಿಮಾನಗಳು 20-25 ನಿಮಿಷ ಹೆಚ್ಚುವರಿ ಹಾರಾಟ ನಡೆಸಬೇಕಾಗುತ್ತಿತ್ತು. ಹಾಗಾಗಿ ಒಂದೋ ವಿಮಾನ ಟಿಕೆಟ್ ದರವನ್ನು ಹೆಚ್ಚಿಸಬೇಕಾಗಿತ್ತು ಅಥವಾ ಬ್ಯಾಗೇಜ್ ಭತ್ತೆಯಲ್ಲಿ ಕಡಿತ ಮಾಡಬೇಕಾಗಿತ್ತು. ಇದರಿಂದ ವಿಮಾನಯಾನ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದವು. ಅದೂ ಅಲ್ಲದೆ, ವಿಮಾನ ಹಾರಾಟ ಸಮಯವನ್ನೂ ಬದಲಿಸಬೇಕಿತ್ತು. ಕೊಲ್ಲಿ ಬಿಕ್ಕಟ್ಟಿನ ಅತಿ ದೊಡ್ಡ ಹೊಡೆತ ಬಿದ್ದದ್ದು ಭಾರತಕ್ಕೆ. ಯಾಕೆಂದರೆ, ಕತರ್‌ನಲ್ಲಿ 6 ಲಕ್ಷ ಭಾರತೀಯರಿದ್ದಾರೆ’’ ಎಂದು ನವದೀಪ್ ಸಿಂಗ್ ನುಡಿದರು.

ಸೂರಿ ಈ ವಿಷಯವನ್ನು ಸೋಮವಾರ ಸ್ಥಳೀಯ ಅಧಿಕಾರಿಗಳ ಬಳಿ ಪ್ರಸ್ತಾಪಿಸಿದರು. ಈ ಹಿನ್ನೆಲೆಯಲ್ಲಿ, ಮಂಗಳವಾರ ಬೆಳಗ್ಗಿನ ವೇಳೆಗೆ ವಾಯುಯಾನದ ಮೇಲೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News