ಕತರ್ ವಿರುದ್ಧ ದಿಗ್ಬಂಧನವಿಲ್ಲ: ಸೌದಿ ವಿದೇಶ ಸಚಿವ

Update: 2017-06-14 15:04 GMT

ರಿಯಾದ್, ಜೂ. 14: ನೆರೆಯ ದೇಶ ಕತರ್ ವಿರುದ್ಧ ದಿಗ್ಬಂಧನೆ ವಿಧಿಸಲಾಗಿಲ್ಲ ಎಂದು ಸೌದಿ ಅರೇಬಿಯ ಮಂಗಳವಾರ ಹೇಳಿದೆ.

ಸೌದಿ ಅರೇಬಿಯ, ಯುಎಇ, ಬಹರೈನ್, ಈಜಿಪ್ಟ್ ಮತ್ತು ಇತರ ಕೆಲವು ದೇಶಗಳು ಕತರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡ ಬಳಿಕ ವಲಯದಲ್ಲಿ ಬಿಕ್ಕಟ್ಟು ನೆಲೆಸಿದೆ.

ಕತರ್ ತನ್ನ ಏಕೈಕ ಭೂಗಡಿಯನ್ನು ಸೌದಿ ಅರೇಬಿಯ ಜೊತೆ ಹೊಂದಿದೆ. ರಾಜತಾಂತ್ರಿಕ ಸಂಬಂಧ ಕಡಿತ ಬಳಿಕ, ಸೌದಿ ಅರೇಬಿಯ ಕತರ್‌ನೊಂದಿಗಿನ ತನ್ನ ಭೂಗಡಿಯನ್ನು ಮುಚ್ಚಿದೆ ಹಾಗೂ ಸೌದಿ, ಯುಎಇ ಮತ್ತು ಬಹರೈನ್‌ಗಳು ತಮ್ಮ ವಾಯುಪ್ರದೇಶವನ್ನು ಕತರ್‌ಗೆ ಮುಚ್ಚಿವೆ.

ಅಮೆರಿಕದ ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಜೊತೆಗೆ ಮಾತುಕತೆ ನಡೆಸಲು ವಾಶಿಂಗ್ಟನ್‌ನಲ್ಲಿರುವ ಸೌದಿ ವಿದೇಶ ಸಚಿವ ಆದಿಲ್ ಅಲ್ ಜುಬೈರ್, ಕತರ್ ವಿರುದ್ಧ ತೆಗೆದುಕೊಳ್ಳಲಾಗಿರುವ ಕ್ರಮಗಳು ಸಮರ್ಥನೀಯ ಎಂದರು.

‘‘ಕತರ್ ವಿರುದ್ಧ ದಿಗ್ಬಂಧನೆ ವಿಧಿಸಲಾಗಿಲ್ಲ. ಕತರ್‌ಗೆ ಮುಕ್ತ ಅವಕಾಶವಿದೆ. ಬಂದರುಗಳು ಮುಕ್ತವಾಗಿವೆ, ವಿಮಾನ ನಿಲ್ದಾಣಗಳು ಮುಕ್ತವಾಗಿವೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News