×
Ad

36 ಎಫ್-15 ವಿಮಾನ ಖರೀದಿಗೆ ಕತರ್-ಅಮೆರಿಕ ಸಹಿ

Update: 2017-06-15 18:40 IST

ದೋಹಾ, ಜೂ. 15: ಅರಬ್ ಕೊಲ್ಲಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಅಮೆರಿಕದೊಂದಿಗೆ ಮಾತುಕತೆಯಲ್ಲಿ ತೊಡಗಿರುವ ಕತರ್, ಅಮೆರಿಕದಿಂದ 36 ಎಫ್-15 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಕತರ್ ಸಹಿ ಹಾಕಲಿದೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್, ಈಜಿಪ್ಟ್ ಮತ್ತು ಇತರ ಹಲವು ದೇಶಗಳು ಕತರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಇತ್ತೀಚೆಗೆ ಕಡಿದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಬಿಕ್ಕಟ್ಟಿನಲ್ಲಿ ಅಮೆರಿಕ ಸೌದಿ ಅರೇಬಿಯ ನೇತೃತ್ವದ ಗುಂಪಿಗೆ ಬೆಂಬಲ ನೀಡುತ್ತಿರುವುದು ಕತರ್ ಪಾಲಿಗೆ ಆತಂಕದ ವಿಷಯವಾಗಿತ್ತು.

ಕತರ್ ರಕ್ಷಣಾ ಸಚಿವ ಖಾಲಿದ್ ಅಲ್-ಅಟ್ಟಿಯಾಹ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಬುಧವಾರ ವಾಶಿಂಗ್ಟನ್‌ನಲ್ಲಿ 12 ಬಿಲಿಯ ಡಾಲರ್ (77,334 ಕೋಟಿ ರೂಪಾಯಿ) ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಪೆಂಟಗನ್ ಹೇಳಿದೆ.

ಕತರ್‌ಗೆ ಅಮೆರಿಕ ಯುದ್ಧ ನೌಕೆಗಳ ಆಗಮನ

ಕತರ್‌ನ ಎಮಿರಿ ನೌಕಾಪಡೆಯೊಂದಿಗೆ ಜಂಟಿ ಸೇನಾ ಕಸರತ್ತು ನಡೆಸಲು ಅಮೆರಿಕದ ಎರಡು ನೌಕಾಪಡೆ ನೌಕೆಗಳು ಬುಧವಾರ ದೋಹಾಕ್ಕೆ ಆಗಮಿಸಿವೆ ಎಂದು ಕತರ್ ಸುದ್ದಿ ಸಂಸ್ಥೆ ಕ್ಯೂಎನ್‌ಎ ವರದಿ ಮಾಡಿದೆ.

ಅಮೆರಿಕದ ಮಧ್ಯಪ್ರಾಚ್ಯದ ಅತಿ ದೊಡ್ಡ ಸೇನಾ ನೆಲೆ ಕತರ್‌ನಲ್ಲಿದೆ. ಅಲ್ಲಿನ ಉದೀದ್ ವಾಯು ನೆಲೆಗೆ 11,000 ಅಮೆರಿಕನ್ ಸೈನಿಕರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News