ಸಿಖ್ ಮಂದಿರದಲ್ಲೇ ಇಫ್ತಾರ್ ಕೂಟ, ನಮಾಝ್: ಸೌಹಾರ್ದತೆಗೆ ಸಾಕ್ಷಿಯಾದ ಗುರುನಾನಕ್ ದರ್ಬಾರ್
ದುಬೈ, ಜೂ.15: ರಮಝಾನ್ ತಿಂಗಳಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿ, ಮಂದಿರದೊಳಗೆ ನಮಾಝ್ ಮಾಡಲು ಅವಕಾಶ ನೀಡುವ ಮೂಲಕ ದುಬೈನ ಸಿಖ್ ಮಂದಿರವೊಂದು ಸೌಹಾರ್ದಕ್ಕೆ ಸಾಕ್ಷಿಯಾಗಿದೆ.
ಗುರುನಾನಕ್ ದರ್ಬಾರ್ ಗುರುದ್ವಾರ ಮಂದಿರವು 30 ದೇಶಗಳ 120 ನಾಗರಿಕರಿಗೆ ಇಫ್ತಾರ್ ಕೂಟ ಏರ್ಪಡಿಸಿತ್ತು. ಮಂದಿರದೊಳಗೆ ಮಗ್ರಿಬ್ ಅಝಾನ್ ನೀಡಿದ ನಂತರ ಮುಸ್ಲಿಮರು ಉಪವಾಸ ತೊರೆದರು. ನಂತರ ಮಂದಿರದಲ್ಲೇ ಕಿಬ್ಲಾ (ನಮಾಝ್ ನಿರ್ವಹಿಸುವ ದಿಕ್ಕು)ಗೆ ಅಭಿಮುಖವಾಗಿ ಮಗ್ರಿಬ್ ನಮಾಝ್ ನಿರ್ವಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗುರುನಾನಕ್ ದರ್ಬಾರ್ ನ ಚೇರ್ ಮೆನ್ ಸುರೇಂದರ್ ಸಿಂಗ್ ಕಂಧಾರಿ, ಇಫ್ತಾರ್ ವಿವಿಧ ಧರ್ಮಗಳ ಜನರನ್ನು ಒಂದುಗೂಡಿಸುವ ಪ್ರಯತ್ನವಾಗಿದೆ. ಜಗತ್ತು ಎದುರಿಸುತ್ತಿರುವ ಭಯೋತ್ಪಾದನೆ ಸಮಸ್ಯೆಗೆ ತಡೆಯೊಡ್ಡಲು ವಿವಿಧ ನಂಬಿಕೆ, ಧರ್ಮ, ರಾಷ್ಟ್ರಗಳ ಜನರ ನಡುವೆ ಸಹೋದರತ್ವ ಬೆಳೆಸಬೇಕಿದೆ. ಇದು ಪರಸ್ಪರ ಸಂವಹನದ ಮೂಲಕ ಮಾತ್ರ ಸಾಧ್ಯವಾಗಲಿದೆ” ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹೊಸದಿಲ್ಲಿಯ ಭಾರತೀಯ ರಾಯಭಾರಿ ಕಚೇರಿಯಲ್ಲಿ 1973ರಲ್ಲಿ ಉದ್ಯೋಗದಲ್ಲಿದ್ದ ಅಲ್ ಸಯೆಘ್, ಭಾರತೀಯ ಸಮುದಾಯವು ಅರಬ್ ದೇಶಗಳೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ನೂರಾರು ವರ್ಷಗಳಿಂದ ನಾವು ಒಗ್ಗಟ್ಟಾಗಿ ಜೀವಿಸುತ್ತಿದ್ದೇವೆ, ನಾವೆಲ್ಲರೂ ವಿವಿಧ ರೀತಿಯಲ್ಲಿ ದೇವರನ್ನು ನಂಬುತ್ತೇವೆ. ದೇವರು ನಮ್ಮನ್ನು ವಿವಿಧ ರೀತಿಯಲ್ಲಿ ಸೃಷ್ಟಿಸಿದ್ದಾನೆ. ನಾವು ಇನ್ನೊಬ್ಬರಿಂದ ಕಲಿಯಬೇಕಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಕೆಲ್ ಪೀಟರ್ಸ್ ಎಂಬವರು ಮಾತನಾಡಿ, ನಮ್ಮ ನಡುವೆ ಇರುವ ವಿವಿಧ ಧರ್ಮ, ರಾಷ್ಟ್ರಗಳ ಜನರೊಂದಿಗೆ ಒಗ್ಗೂಡುವುದು ಅದ್ಭುತ ಅನುಭವ. ಸಿಖ್ ಮಂದಿರದಲ್ಲಿ ನಡೆದ ಇಫ್ತಾರ್ ಕೂಟ ವಿಶಿಷ್ಟವಾದುದು ಎಂದರು.
ಗುರುನಾನಕ್ ದರ್ಬಾರ್ ಗಲ್ಫ್ ನ ಅತ್ಯಂತ ದೊಡ್ಡ ಸಿಖ್ ಮಂದಿರವಾಗಿದೆ. ಉಚಿತ ಉಪಹಾರಗಳನ್ನು ವಿತರಿಸುವ ಮೂಲಕ ಈ ಮಂದಿರ ಈ ಹಿಂದೆ ಗಿನ್ನೆಸ್ ದಾಖಲೆ ನಿರ್ಮಿಸಿತ್ತು.