ಸೌದಿ ದೊರೆ ಸಲ್ಮಾನ್ ‘ವರ್ಷದ ಇಸ್ಲಾಮಿಕ್ ವ್ಯಕ್ತಿ’

Update: 2017-06-16 14:54 GMT

ರಿಯಾದ್, ಜೂ.16: ಎರಡು ಪವಿತ್ರ ಮಸೀದಿಗಳ ರಕ್ಷಣೆಯ ಜವಾಬ್ದಾರಿ ಹೊಂದಿರುವ ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲ್ಲಝೀಝ್ ಅಲ್ ಸೌದ್ ಅವರನ್ನು ‘ವರ್ಷದ ಇಸ್ಲಾಮಿಕ್ ವ್ಯಕ್ತಿ’ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

  ‘ದುಬೈ ಇಂಟರ್‌ನ್ಯಾಶನಲ್ ಹೋಲಿ ಕುರ್‌ಆನ್ ಅವಾರ್ಡ್’ (ಡಿಐಎಚ್‌ಕ್ಯುಎ) ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ, ‘ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಜ್ಞಾನ ಪ್ರತಿಷ್ಠಾನ’ದ ಅಧ್ಯಕ್ಷ ಶೇಖ್ ಅಹ್ಮದ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್, ಸೌದಿ ದೊರೆಯ ಪ್ರತಿನಿಧಿ, ಸೌದಿಯ ಇಸ್ಲಾಮಿಕ್ ವ್ಯವಹಾರಗಳು ಮತ್ತು ಮಾರ್ಗದರ್ಶನ ಸಚಿವ ಶೇಖ್ ಸಲೆಹ್ ಬಿನ್ ಅಬ್ದುಲ್ಲಝೀಝ್ ಬಿನ್ ಮುಹಮ್ಮದ್ ಅಲ್ ಅಲ್-ಶೇಖ್‌ರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

 ಡಿಐಎಚ್‌ಕ್ಯುಎ ಯುವಜನರಲ್ಲಿ ಪವಿತ್ರ ಕುರ್‌ಆನ್ ಕಂಠಪಾಠಕ್ಕೆ ಉತ್ತೇಜನ ನೀಡುತ್ತಿದ್ದು, ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ನಿರಂತರ ಪ್ರೋತ್ಸಾಹ ನೀಡುತ್ತಿರುವ ಯುಎಇಯ ಪ್ರಧಾನಿ ಹಾಗೂ ಉಪಾಧ್ಯಕ್ಷ ಹಾಗೂ ದುಬೈಯ ದೊರೆ ಶೇಖ್ ಅಹ್ಮದ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಸಹಕಾರವನ್ನು ಸೌದಿ ಸಚಿವರು ಶ್ಲಾಘಿಸಿದರು.

ಡಿಐಎಚ್‌ಕ್ಯುಎ ನೀಡುತ್ತಿರುವ ಈ ವರ್ಷದ ಇತರ ಹತ್ತು ಪುರಸ್ಕಾರಗಳನ್ನೂ ಇದೇ ಸಂದರ್ಭ ಬಾಂಗ್ಲಾದೇಶ, ಅಮೆರಿಕ, ಜಾಂಬಿಯ, ಸೌದಿ ಅರೆಬಿಯ, ಟ್ಯುನಿಷಿಯ, ಬಹರೈನ್, ಲಿಬಿಯ, ಕುವೈತ್, ಮಾರಿಟಾನಿಯ, ರುವಾಂಡ ಮತ್ತು ಈಜಿಪ್ಟ್ ದೇಶಗಳ ವಿಜೇತರಿಗೆ ಪ್ರದಾನ ಮಾಡಲಾಯಿತು.

  ‘ಇಸ್ಲಾಮಿಕ್ ವರ್ಷದ ವ್ಯಕ್ತಿ’ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಸೌದಿ ದೊರೆ ಸಲ್ಮಾನ್ ಇಸ್ಲಾಂ ಧರ್ಮ ಮತ್ತು ವಿಶ್ವದಾದ್ಯಂತದ ಮುಸ್ಲಿಮರ ಸೇವೆ ನಡೆಸುತ್ತಿರುವ ರೀತಿ ಶ್ಲಾಘನೀಯ ಎಂದು ಪ್ರತಿಷ್ಠಾನದ ಅಧ್ಯಕ್ಷ ಶೇಖ್ ಅಹ್ಮದ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News