ಗಲ್ಫ್ ಬಿಕ್ಕಟ್ಟು ಮಾತುಕತೆಗೆ ಮುನ್ನ ದಿಗ್ಬಂಧ ತೆರವು: ಕತರ್ ಆಗ್ರಹ

Update: 2017-06-20 06:36 GMT

ದೋಹ, ಜೂ.19: ಗಲ್ಫ್ ನಲ್ಲಿ ಉದ್ಭವಿಸಿರುವ ರಾಜತಾಂತ್ರಿಕ ಬಿಕ್ಕಟ್ಟಿಗೆ ಪರಿಹಾರ ರೂಪಿಸಲು ನಡೆಸುವ ಯಾವುದೇ ಮಾತುಕತೆಯಲ್ಲಿ ತಾನು ಪಾಲ್ಗೊಳ್ಳುವ ಮೊದಲು ತನ್ನ ವಿರುದ್ಧ ಹೇರಲಾಗಿರುವ ದಿಗ್ಬಂಧನ ತೆರವಾಗಬೇಕು ಎಂದು ಕತರ್ ಆಗ್ರಹಿಸಿದೆ.

ಕತರ್ ವಿರುದ್ಧ ಸೌದಿ ಅರೆಬಿಯ, ಯುಎಇ, ಬಹ್ರೈನ್ ಮತ್ತಿತರ ದೇಶಗಳು ವಿಧಿಸಿರುವ ದಿಗ್ಬಂಧ ದಬ್ಬಾಳಿಕೆಯ ಕ್ರಮವಾಗಿದೆ ಎಂದು ಹೇಳಿರುವ ಕತರ್ ವಿದೇಶ ವ್ಯವಹಾರ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್-ಥನಿ, ಯಾವುದೇ ಮಾತುಕತೆ ನಡೆಯಬೇಕಿದ್ದರೆ ಇದನ್ನು ತೆರವುಗೊಳಿಸಬೇಕು ಎಂದರು.

ಮಾತುಕತೆ ನಾಗರಿಕ ರೀತಿಯಲ್ಲಿ , ಶಿಷ್ಟಾಚಾರದಂತೆ ಸಾಗಬೇಕು. ಅಲ್ಲಿ ಯಾವುದೇ ಒತ್ತಡ ಇರಬಾರದು .ಆದರೆ ಮಾತುಕತೆಯ ಕುರಿತಂತೆ ಗಲ್ಫ್ ರಾಷ್ಟ್ರಗಳು ಅಥವಾ ಅಮೆರಿಕ, ಬ್ರಿಟನ್, ಫ್ರಾನ್ಸ್ ಮುಂತಾದ ದೇಶಗಳಿಂದ ತಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದವರು ಹೇಳಿದರು.

ತಮ್ಮ ದೇಶದ ವಿರುದ್ಧ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧ ಇದುವರೆಗೆ ಹೆಚ್ಚಿನ ಪರಿಣಾಮ ಬೀರಿಲ್ಲ. ಆದರೆ ನಮ್ಮ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳುವಂತಿಲ್ಲ ಎಂದ ಅವರು, ಈ ದಿಗ್ಭಂಧದಿಂದ ಅಮೆರಿಕ, ಬ್ರಿಟನ್, ಫ್ರಾನ್ಸ್ ಮುಂತಾದ ಕತರ್ ಮಿತ್ರರಾಷ್ಟ್ರಗಳಿಗೂ ಸಾಕಷ್ಟು ತೊಂದರೆಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News