ಸೌದಿ: ಭಾರತೀಯರಿಗೆ ಹೊರೆಯಾಗಲಿರುವ ‘ಕುಟುಂಬ ತೆರಿಗೆ’ ಜುಲೈ ಒಂದರಿಂದ ಜಾರಿ

Update: 2017-06-21 13:42 GMT

ರಿಯಾದ್, ಜೂ. 21: ಸೌದಿ ಅರೇಬಿಯವು ಹೊಸದಾಗಿ ಜಾರಿಗೊಳಿಸಲು ಉದ್ದೇಶಿಸಿರುವ ‘ಕುಟುಂಬ ತೆರಿಗೆ’ಯಿಂದಾಗಿ ಆ ದೇಶದಲ್ಲಿರುವ ತಮ್ಮ ಕುಟುಂಬಗಳನ್ನು ಸಾಕಲು ಭಾರತೀಯ ವಲಸಿಗರು ಭಾರೀ ಪ್ರಯಾಸಪಡುವಂತಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

 ಸೌದಿ ಅರೇಬಿಯವು ‘ಆಶ್ರಿತ ತೆರಿಗೆ’ಯನ್ನು ಜುಲೈ ಒಂದರಿಂದ ಜಾರಿಗೊಳಿಸುತ್ತಿದೆ. ಈ ತೆರಿಗೆಯನ್ನು ಪ್ರತಿ ತಿಂಗಳು ಸಂಗ್ರಹಿಸಲಾಗುತ್ತದೆ.

ನೂತನ ತೆರಿಗೆ ನಿಯಮದನ್ವಯ, ಸರಕಾರವು ಪ್ರತಿಯೊಬ್ಬ ಆಶ್ರಿತರಿಗೆ ತಿಂಗಳಿಗೆ 100 ರಿಯಾಲ್ (ಸುಮಾರು 1723 ರೂಪಾಯಿ) ತೆರಿಗೆ ವಿಧಿಸುತ್ತದೆ.

‘‘ತಿಂಗಳಿಗೆ 5,000 ರಿಯಾಲ್ (ಸುಮಾರು 86,000 ರೂಪಾಯಿ) ವೇತನ ಹೊಂದಿರುವವರಿಗೆ ಸೌದಿ ಅರೇಬಿಯವು ಕುಟುಂಬ ವೀಸಾವನ್ನು ನೀಡುತ್ತದೆ. ದೇಶದಲ್ಲಿ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುವ ಓರ್ವ ಭಾರತೀಯ ವಲಸಿಗ ತಿಂಗಳಿಗೆ 300 ರಿಯಾಲ್ (ಸುಮಾರು 5,100 ರೂಪಾಯಿ) ತೆರಿಗೆಯನ್ನು ಪಾವತಿಸಬೇಕಾಗುತ್ತದೆ’’ ಎಂದು ಪತ್ರಿಕೆ ಹೇಳಿದೆ.

ತೆರಿಗೆಯು 2020ರವರೆಗೆ ಪ್ರತಿ ವರ್ಷ ಪ್ರತಿಯೊಬ್ಬ ಆಶ್ರಿತನಿಗೆ 100 ರಿಯಾಲ್‌ನಷ್ಟು ಹೆಚ್ಚುತ್ತಾ ಹೋಗುತ್ತದೆ ಎಂದು ಪತ್ರಿಕೆ ತಿಳಿಸಿದೆ.

‘‘ಅಂದರೆ, 2020ರಲ್ಲಿ ಒಂದು ಕುಟುಂಬವು ಪ್ರತಿಯೊಬ್ಬ ಆಶ್ರಿತನಿಗೆ ತಿಂಗಳಿಗೆ 400 ರಿಯಾಲ್ (ಸುಮಾರು 6,900 ರೂಪಾಯಿ) ಪಾವತಿಸಬೇಕಾಗುತ್ತದೆ’’ ಎಂದಿದೆ.

ಎಲ್ಲಕ್ಕಿಂತಲೂ ಹೆಚ್ಚಿನ ಹೊರೆಯೆಂದರೆ, ತೆರಿಗೆಯನ್ನು ಮುಂಚಿತವಾಗಿಯೇ ಪಾವತಿಸಬೇಕು.

ಸೌದಿ ಅರೇಬಿಯದಲ್ಲಿರುವ 400ಕ್ಕೂ ಅಧಿಕ ಭಾರತೀಯ ಕಂಪೆನಿಗಳಲ್ಲಿ ಸುಮಾರು 41 ಲಕ್ಷ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಭಾರತೀಯ ಕೆಲಸಗಾರರಿಗೆ ಸೌದಿ ಅರೇಬಿಯ ನೆಚ್ಚಿನ ತಾಣವಾಗಿದೆ. ಯಾಕೆಂದರೆ, ಇದುವರೆಗೆ ಅದು ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News