ಸೌದಿ: ಪಟ್ಟದ ಯುವರಾಜನಾಗಿ ಮಗನನ್ನು ನೇಮಿಸಿದ ದೊರೆ ಸಲ್ಮಾನ್

Update: 2017-06-21 13:46 GMT

ರಿಯಾದ್ (ಸೌದಿ ಅರೇಬಿಯ), ಜೂ. 21: ಸೌದಿ ಅರೇಬಿಯದ ದೊರೆ ಸಲ್ಮಾನ್ ತನ್ನ 31 ವರ್ಷದ ಮಗ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ಪಟ್ಟದ ಯುವರಾಜನಾಗಿ ನೇಮಿಸಿದ್ದಾರೆ ಹಾಗೂ ಅವರನ್ನು ತನ್ನ ಬಳಿಕ ಸಿಂಹಾಸನದ ಪ್ರಥಮ ಹಕ್ಕುದಾರನಾಗಿ ನೇಮಿಸಿದ್ದಾರೆ.

ಅದೇ ವೇಳೆ, ದೇಶದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿದ್ದ ಹಾಗೂ ಅಮೆರಿಕಕ್ಕೆ ಆತ್ಮೀಯರಾಗಿದ್ದ ದೇಶದ ಆಂತರಿಕ ಸಚಿವ ರಾಜಕುಮಾರ ಮುಹಮ್ಮದ್ ಬಿನ್ ನಯೀಫ್‌ರನ್ನು ಪಟ್ಟದ ಯುವರಾಜ ಹುದ್ದೆಯಿಂದ ಹಾಗೂ ಅವರ ಆಂತರಿಕ ಸಚಿವ ಹುದ್ದೆಯಿಂದ ವಜಾಗೊಳಿಸಿದ್ದಾರೆ.

ನೂತನ ನೇಮಕಾತಿಗೂ ಮೊದಲು, ಮುಹಮ್ಮದ್ ಬಿನ್ ನಯೀಫ್ ಸಿಂಹಾಸನಕ್ಕೆ ಮೊದಲ ವಾರೀಸುದಾರರಾಗಿದ್ದರು.

ಈ ಸಂಬಂಧ ದೊರೆ ಸಲ್ಮಾನ್ ಸರಣಿ ರಾಜಾಜ್ಞೆಗಳನ್ನು ಹೊರಡಿಸಿದರು ಹಾಗೂ ಅವುಗಳನ್ನು ಸರಕಾರಿ ಒಡೆತನದ ಸೌದಿ ಪ್ರೆಸ್ ಏಜನ್ಸಿ ಪ್ರಕಟಿಸಿತು.

ನೂತನ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಈಗಾಗಲೇ ರಕ್ಷಣಾ ಸಚಿವರಾಗಿದ್ದಾರೆ ಹಾಗೂ ದೇಶದ ಆರ್ಥಿಕತೆಯನ್ನು ಪುನಾರೂಪಿಸುವ ಹೊಣೆ ಹೊತ್ತ ಆರ್ಥಿಕ ಸಮಿತಿಯೊಂದರ ಮುಖ್ಯಸ್ಥರಾಗಿದ್ದಾರೆ.

ನೂತನ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಈವರೆಗೆ ಉಪ ಯುವರಾಜರಾಗಿದ್ದರು. ಅಂದರೆ, ದೊರೆ ಸಲ್ಮಾನ್ ಬಳಿಕ ಪಟ್ಟಕ್ಕೆ ಎರಡನೆ ಸ್ಥಾನದಲ್ಲಿದ್ದರು.

  ಸಲ್ಮಾನ್ 2015 ಜನವರಿಯಲ್ಲಿ ಪಟ್ಟಕ್ಕೇರುವ ಮೊದಲು ಯುವ ರಾಜಕುಮಾರ ಸೌದಿ ಅರೇಬಿಯ ಮತ್ತು ಹೊರಗಡೆಗೆ ಅಪರಿಚಿತರಾಗಿದ್ದರು. ಸಲ್ಮಾನ್ ಯುವರಾಜರಾಗಿದ್ದಾಗ ಮುಹಮ್ಮದ್ ಬಿನ್ ಸಲ್ಮಾನ್ ತನ್ನ ತಂದೆಯ ರಾಜ ಆಸ್ಥಾನದ ಉಸ್ತುವಾರಿಯಾಗಿದ್ದರು.

ಬಹುತೇಕ ಪರಮಾಧಿಕಾರವುಳ್ಳ ಸೌದಿ ದೊರೆ ಸಲ್ಮಾನ್, ಸಿಂಹಾಸನಕ್ಕೆ ಏರಿದ ಕೂಡಲೇ ತನ್ನ ಮಗನಿಗೆ ಭಾರೀ ಅಧಿಕಾರಗಳನ್ನು ನೀಡಿದರು. ಇದು ರಾಜ ಕುಟುಂಬದ ಒಳಗೆಯೇ ಅಚ್ಚರಿ ಹುಟ್ಟಿಸಿತು. ಯಾಕೆಂದರೆ, ರಾಜ ಕುಟುಂಬದಲ್ಲಿ ಮುಹಮ್ಮದ್ ಬಿನ್ ಸಲ್ಮಾನ್‌ರಿಗಿಂತಲೂ ಹಿರಿಯ ಮತ್ತು ಹೆಚ್ಚು ಅನುಭವ ಹೊಂದಿದ ಹಲವಾರು ಸದಸ್ಯರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News