×
Ad

ಶಾರ್ಜಾ 2019ರ ‘ಜಾಗತಿಕ ಪುಸ್ತಕ ರಾಜಧಾನಿ’: ಯುನೆಸ್ಕೊ ಘೋಷಣೆ

Update: 2017-06-28 19:22 IST

ದುಬೈ, ಜೂ. 28: ಶಾರ್ಜಾವನ್ನು 2019 ಸಾಲಿನ ಪ್ರತಿಷ್ಠಿತ ‘ಜಾಗತಿಕ ಪುಸ್ತಕ ರಾಜಧಾನಿ’ಯನ್ನಾಗಿ ಯುನೆಸ್ಕೊ ಘೋಷಿಸಿದೆ.

ಅಲ್ಲಿ ನಡೆಯುತ್ತಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಗುಣಮಟ್ಟ ಮತ್ತು ದೇಶದ ಎಲ್ಲರಿಗೂ ಪುಸ್ತಕಗಳು ಸಿಗುವ ನಿಟ್ಟಿನಲ್ಲಿ ಅದು ಮಾಡಿರುವ ಪ್ರಯತ್ನಗಳನ್ನು ಗಮನದಲ್ಲಿರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

‘‘ಜಾಗತಿಕ ಪುಸ್ತಕ ರಾಜಧಾನಿಯನ್ನಾಗಿ ಶಾರ್ಜಾವನ್ನು ನೇಮಿಸಿರುವುದನ್ನು ಹಾಗೂ ಹಿಂದುಳಿದ ಸಮುದಾಯಗಳೂ ಸೇರಿದಂತೆ ಗರಿಷ್ಠ ಜನರಿಗೆ ಪುಸ್ತಕಗಳು ಸಿಗುವಂತಾಗಲು ಈ ನಗರವು ಮಾಡಿರುವ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ’’ ಎಂದು ಯುನೆಸ್ಕೊದ ಮಹಾ ನಿರ್ದೇಶಕಿ ಐರಿನಾ ಬೊಕೊವ ಹೇಳಿದರು.

ಶಾರ್ಜಾವು ಈಗಾಗಲೇ ‘ಅರಬ್ ಸಂಸ್ಕೃತಿಯ ರಾಜಧಾನಿ’ (1998), ‘ಇಸ್ಲಾಮಿಕ್ ಸಂಸ್ಕೃತಿಯ ರಾಜಧಾನಿ’ (2014) ಮತ್ತು ‘ಅರಬ್ ಪ್ರವಾಸೋದ್ಯಮದ ರಾಜಧಾನಿ’ (2015) ಮುಂತಾದ ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ನೂತನ ಪ್ರಶಸ್ತಿಯು ಅದರ ಕಿರೀಟಕ್ಕೆ ಇನ್ನೊಂದು ತುರಾಯಿಯಾಗಿದೆ.

ಶಾರ್ಜಾವು ಈ ಪ್ರಶಸ್ತಿಯನ್ನು ಪಡೆದ ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ಪ್ರಥಮ ಹಾಗೂ ಅರಬ್ ಜಗತ್ತು ಮತ್ತು ಮಧ್ಯ ಪ್ರಾಚ್ಯದ ಮೂರನೆ ದೇಶವಾಗಿದೆ.

ಕೊಲ್ಲಿ ಸಹಕಾರ ಮಂಡಳಿಯಲ್ಲಿ ಬಹರೈನ್, ಕುವೈತ್, ಒಮನ್, ಕತರ್, ಸೌದಿ ಅರೇಬಿಯ ಮತ್ತು ಯುಎಇ ದೇಶಗಳಿವೆ.

ಪ್ರಶಸ್ತಿ ಪಡೆದ 19ನೆ ನಗರ

ಶಾರ್ಜಾ ‘ಜಾಗತಿಕ ಪುಸ್ತಕ ರಾಜಧಾನಿ’ ಪ್ರಶಸ್ತಿಯನ್ನು ಪಡೆದ ವಿಶ್ವದ 19ನೆ ನಗರವಾಗಿದೆ.

ಈ ಹಿಂದೆ ಪ್ರಶಸ್ತಿ ಪಡೆದ ನಗರಗಳು: ಮ್ಯಾಡ್ರಿಡ್ (2001), ಅಲೆಕ್ಸಾಂಡ್ರಿಯ (2002), ಹೊಸದಿಲ್ಲಿ (2003), ಆ್ಯಂಟ್‌ವರ್ಪ್ (2004), ಮಾಂಟ್ರಿಯಲ್ (2005), ಟ್ಯೂರಿನ್ (2006), ಬೊಗೊಟ (2007), ಆ್ಯಮ್‌ಸ್ಟರ್‌ಡಂ (2008), ಬೆರೂತ್ (2009), ಲ್ಯುಬ್ಲಿಜನ (2010), ಬ್ಯೂನಸ್ ಐರಿಸ್ (2011), ಯೆರವನ್ (2012), ಬ್ಯಾಂಕಾಕ್ (2013), ಪೋರ್ಟ್ ಹಾರ್‌ಕೋರ್ಟ್ (2014), ಇಂಚಿಯನ್ (2015), ರೊಕ್ಲಾ (2016), ಕೊನಕ್ರಿ (2017) ಮತ್ತು ಅಥೆನ್ಸ್ (2018).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News