ಕತರ್ ವಿರುದ್ಧ ಹೊಸ ದಿಗ್ಬಂಧ ಪರಿಶೀಲನೆ: ರಶ್ಯಕ್ಕೆ ಯುಎಇ ರಾಯಭಾರಿ ಹೇಳಿಕೆ
ದುಬೈ, ಜೂ. 28: ಕತರ್ ವಿರುದ್ಧ ಹೊಸ ದಿಗ್ಬಂಧನಗಳನ್ನು ವಿಧಿಸುವ ಬಗ್ಗೆ ಕೊಲ್ಲಿ ಅರಬ್ ದೇಶಗಳು ಪರಿಶೀಲಿಸುತ್ತಿವೆ ಹಾಗೂ ಒಂದೋ ತಮ್ಮಿಂದಿಗೆ ಅಥವಾ ಕತರ್‌ನೊಂದಿಗೆ ವ್ಯವಹಾರ ಮಾಡಿ ಎಂಬುದಾಗಿ ತಮ್ಮ ವ್ಯಾಪಾರ ಭಾಗೀದಾರರಿಗೆ ಅವು ಸೂಚಿಸಬಹುದಾಗಿದೆ ಎಂದು ರಶ್ಯಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಯಭಾರಿ ಹೇಳಿದ್ದಾರೆ.
‘‘ಕತರ್ ವಿರುದ್ಧ ವಿಧಿಸಬಹುದಾದ ಹಲವಾರು ಆರ್ಥಿಕ ದಿಗ್ಬಂಧನಗಳ ಬಗ್ಗೆ ನಾವೀಗ ಪರಿಶೀಲನೆ ನಡೆಸುತ್ತಿದ್ದೇವೆ’’ ಎಂದು ಲಂಡನ್‌ನಲ್ಲಿ ‘ದ ಗಾರ್ಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಉಮರ್ ಘೋಬಶ್ ಹೇಳಿದರು.
ಕೊಲ್ಲಿ ವಲಯದಲ್ಲಿರುವ ಭಯೋತ್ಪಾದಕ ಗುಂಪುಗಳಿಗೆ ಕತರ್ ಹಣ ಪೂರೈಸುತ್ತಿದೆ ಎಂದು ಆರೋಪಿಸಿ ಯುಎಇ, ಸೌದಿ ಅರೇಬಿಯ, ಬಹರೈನ್, ಈಜಿಪ್ಟ್ ಮುಂತಾದ ಈ ವಲಯದ ಅರಬ್ ದೇಶಗಳು ಕತರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.
ಆದರೆ, ಈ ಆರೋಪಗಳನ್ನು ಕತರ್ ನಿರಾಕರಿಸಿದೆ.
‘‘ನಮ್ಮ ವ್ಯಾಪಾರಿ ಭಾಗೀದಾರರಿಗೆ ನಾವು ಶರತ್ತುಗಳನ್ನೂ ವಿಧಿಸಬಹುದಾಗಿದೆ. ನೀವು ಒಂದೋ ನಮ್ಮಾಂದಿಗೆ ವ್ಯಾಪಾರ ಮಾಡಬೇಕು, ಇಲ್ಲವೇ ಕತರ್‌ನೊಂದಿಗೆ ಮಾಡಿ, ಇಬ್ಬರ ಜೊತೆಯೂ ಸಾಧ್ಯವಿಲ್ಲ ಎಂಬುದಾಗಿ ನಾವು ನಮ್ಮ ವ್ಯಾಪಾರಿ ಭಾಗೀದಾರರಿಗೆ ಹೇಳಬಹುದಾಗಿದೆ’’ ಎಂದು ಅವರು ಹೇಳಿದರು.