ಸೌದಿ ಅರೇಬಿಯಾ: ‘ಮೆರ್ಸ್ ’ಕಾಯಿಲೆ ಪೀಡಿತ 13 ರೋಗಿಗಳು ಆಸ್ಪತ್ರೆಗೆ ದಾಖಲು

Update: 2017-07-01 15:26 GMT

ರಿಯಾದ್, ಜು.1: ಸೌದಿ ಅರೇಬಿಯಾದಲ್ಲಿ ಮಾರಣಾಂತಿಕ ‘ಮೆರ್ಸ್-ಸಿಒವಿ’ (ಮಿಡ್ಲ್ ಈಸ್ಟ್ ರೆಸ್ಪಿರೆಟರಿ ಸಿಂಡ್ರೋಮ್-ಕೊರೊನ ವೈರಸ್)ಕಾಯಿಲೆ ಬಾಧಿತ 13 ರೋಗಿಗಳು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು , ಎರಡು ದಿನದ ಹಿಂದೆ 30ರ ಹರೆಯದ ಮಹಿಳೆಯೋರ್ವರು ಈ ರೋಗದಿಂದ ಮೃತಪಟ್ಟಿದ್ದಾರೆ. ಒಂಟೆಯ ಮೂಲಕ ಪರೋಕ್ಷವಾಗಿ ಈ ರೋಗದ ವೈರಸ್ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.

ಸೌದಿ ಅರೇಬಿಯಾದಲ್ಲಿ 2012ರ ಜೂನ್‌ನಿಂದ 1,667 ಮೆರ್ಸ್-ಸಿಒವಿ ಪ್ರಕರಣ ದಾಖಲಾಗಿದ್ದು ಇದರಲ್ಲಿ 680 ಮಂದಿ ಮೃತಪಟ್ಟಿದ್ದಾರೆ.

ಒಂಟೆ ಜ್ವರ ಎಂದೂ ಕರೆಯಲಾಗುವ ಮೆರ್ಸ್ ರೋಗವು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗವಾಗಿದ್ದು ಇದನ್ನು 2012ರಲ್ಲಿ ಸೌದಿ ಅರೇಬಿಯಾದಲ್ಲಿ ಪತ್ತೆಹಚ್ಚಲಾಗಿತ್ತು. ಮನುಷ್ಯರಿಗೆ ಸಂಬಂಧಿಸಿ, ಶೇ.80ರಷ್ಟು ಮೆರ್ಸ್ ಕಾಯಿಲೆಯ ಪ್ರಕರಣ ಸೌದಿಯಲ್ಲಿ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ) ತಿಳಿಸಿದೆ. ಮೆರ್ಸ್ ರೋಗದ ಲಕ್ಷಣ ಕೆಲವೊಮ್ಮೆ ಗೋಚರಕ್ಕೇ ಬಾರದೆ ಇರಬಹುದು. ಇನ್ನು ಕೆಲವರಲ್ಲಿ ಸ್ವಲ್ಪ ಮಟ್ಟಿನ ಉಸಿರಾಟ ಸಮಸ್ಯೆ ಕಂಡುಬರಬಹುದು. ಕೆಲವೊಮ್ಮೆ  ಶ್ವಾಸೋಚ್ಛಾಸ ಕ್ರಿಯೆಯಲ್ಲಿ ತೀವ್ರವಾದ ಸಮಸ್ಯೆ ಕಂಡು ಬರಬಹುದು.

ಜ್ವರ, ಕೆಮ್ಮು ಹಾಗೂ ಉಸಿರಾಟಕ್ಕೆ ತೊಂದರೆ- ಇದು ಮೆರ್ಸ್ ಕಾಯಿಲೆಯ ಸಾಮಾನ್ಯ ಲಕ್ಷಣ. ನ್ಯುಮೋನಿಯಾ ಬಾಧಿಸುವ ಸಾಧ್ಯತೆ ಇರುತ್ತದೆ. ಉದರಕ್ಕೆ ಸಂಬಂಧಿಸಿದ ತೊಂದರೆ, ಭೇದಿ ಕೂಡಾ ಕಾಣಿಸಿಕೊಳ್ಳುತ್ತದೆ. ಹಿರಿಯರಲ್ಲಿ (ವೃದ್ಧರಲ್ಲಿ) ಈ ವೈರಸ್‌ಗಳು ತೀವ್ರವಾದ ಕಾಯಿಲೆಗೆ ಕಾರಣವಾಗುತ್ತವೆ.

ಪ್ರಸಕ್ತ ಈ ಕಾಯಿಲೆಗೆ ಯಾವುದೇ ಚುಚ್ಚುಮದ್ದು ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ರೋಗಿಯ ಚಿಕಿತ್ಸಕ ಸ್ಥಿತಿಯನ್ನು ಅವಲಂಬಿಸಿ ಈಗ ಚಿಕಿತ್ಸೆ ನೀಡಲಾಗುತ್ತದೆ. ಸೋಂಕು ತಗುಲಿದ ಸವಾರಿ ಒಂಟೆಗಳು ಅಥವಾ ಮನುಷ್ಯರ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಈ ರೋಗದ ಸೋಂಕು ತಗುಲುತ್ತದೆ ಎಂದು ತಿಳಿದುಬಂದಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ರವಾಸಕ್ಕೆ ತೆರಳಿದ್ದ ಕೆಲವು ವಿದೇಶಿಯರಿಗೆ ಕೂಡಾ ಈ ಸೋಂಕು ತಗುಲಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಹೊರತುಪಡಿಸಿ, ಇತರ ರಾಷ್ಟ್ರಗಳಲ್ಲಿ ಈ ರೋಗದ ವೈರಸ್‌ಗಳು ಕಾಣಿಸಿಕೊಳ್ಳುವುದು ಅಪರೂಪವಾಗಿದೆ ಎಂದು ಡಬ್ಲೂಎಚ್‌ಒ ವರದಿ ತಿಳಿಸಿದೆ.

ಕೃಷಿ ಕ್ಷೇತ್ರ, ಮಾರುಕಟ್ಟೆ , ಹಟ್ಟಿ ಇತ್ಯಾದಿಗಳಿಗೆ ಭೇಟಿ ನೀಡುವ ಸಂದರ್ಭ ಸವಾರಿಗೆ ಬಳಸಲಾಗುವ ಒಂಟೆ , ಇತರ ಒಂಟೆಗಳು ಅಥವಾ ಸಾಕುಪ್ರಾಣಿಗಳ ಸಂಪರ್ಕ ಆಗುವ ಸಂಭವವಿದೆ. ಆದ್ದರಿಂದ ಇವನ್ನು ಮುಟ್ಟುವ ಮೊದಲು ಹಾಗೂ ಬಳಿಕ ಕೈಗಳನ್ನು ತೊಳೆದುಕೊಳ್ಳಬೇಕು. ಅಲ್ಲದೆ ರೋಗಪೀಡಿತ ಪ್ರಾಣಿಗಳನ್ನು ಸ್ಪರ್ಶಿಸಬಾರದು. ಒಂಟೆಗಳ ಮಾಂಸ ಅಥವಾ ಹಾಲನ್ನು ಚೆನ್ನಾಗಿ ಕುದಿಸಿ ಬಳಸಬೇಕು. ಇವನ್ನು ಬೇಯಿಸದ ಪದಾರ್ಥಗಳ ಜೊತೆ ಇಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News