ಯಮನ್: ಕಾಲರಾದಿಂದಾದ ಸಾವು 1,500ಕ್ಕೆ ಏರಿಕೆ

Update: 2017-07-02 13:39 GMT

ಏಡನ್ (ಯಮನ್), ಜು. 2: ಯಮನ್‌ನಲ್ಲಿ ಕಾಲರಾ ರೋಗದಿಂದ ಮೃತಪಟ್ಟವರ ಸಂಖ್ಯೆ 1,500ಕ್ಕೆ ಏರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯಮನ್ ಪ್ರತಿನಿಧಿ ನೆವಿಯೊ ಝಗಾರಿಯ ಶನಿವಾರ ಹೇಳಿದ್ದಾರೆ ಹಾಗೂ ಈ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ಹೇಳಿದ್ದಾರೆ.

ಸೌದಿ ನೇತೃತ್ವವದ ಮಿತ್ರಪಡೆ ಮತ್ತು ಇರಾನ್ ಜೊತೆ ನಂಟು ಹೊಂದಿರುವ ಹೌದಿ ಬಂಡುಕೋರರ ನಡುವೆ 27 ತಿಂಗಳುಗಳ ಕಾಲ ನಡೆದ ಯುದ್ಧದಿಂದ ಯಮನ್ ಜರ್ಝರಿತವಾಗಿದ್ದು, ಇದು ಸಾಂಕ್ರಾಮಿಕ ರೋಗದ ಉಗಮಕ್ಕೆ ಕಾರಣವಾಯಿತು. ಸ್ವಚ್ಛತೆಯ ಕೊರತೆಯಿರುವ ಸ್ಥಳಗಳಲ್ಲಿ ರೋಗ ವೇಗವಾಗಿ ಹರಡುತ್ತದೆ.

 ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಮತ್ತು ವಿಶ್ವಬ್ಯಾಂಕ್‌ಗಳ ಪ್ರತಿನಿಧಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝಗಾರಿಯ, ಜೂನ್ 30ರವರೆಗೆ 2.46 ಲಕ್ಷ ಕಾಲರಾ ಪ್ರಕರಣಗಳು ವರದಿಯಾಗಿವೆ ಎಂದರು.

 ಯಮನ್‌ನ ಹೆಚ್ಚಿನ ಆರೋಗ್ಯ ಮೂಲಸೌಕರ್ಯ ಕುಸಿದು ಬಿದ್ದಿದೆ ಹಾಗೂ ಆರೋಗ್ಯ ಕೆಲಸಗಾರರು ಆರು ತಿಂಗಳಿಗೂ ಹೆಚ್ಚು ಸಮಯದಿಂದ ವೇತನ ಪಡೆದಿಲ್ಲ. ಹಾಗಾಗಿ, ಕಾಲರಾವನ್ನು ಎದುರಿಸುವ ತಂಡದಲ್ಲಿ ಸೇರಿಕೊಳ್ಳಲು ವೈದ್ಯರು, ನರ್ಸ್‌ಗಳು, ಸ್ವಚ್ಛತಾ ಕೆಲಸಗಾರರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ‘ಭತ್ತೆ’ಗಳನ್ನು ನೀಡಲಾಗುತ್ತಿದೆ.

ವಿಶ್ವಬ್ಯಾಂಕ್ ನೆರವಿನಿಂದ ವಿಶ್ವ ಆರೋಗ್ಯ ಸಂಸ್ಥೆಯು 50-60 ಹಾಸಿಗೆಗಳ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News