×
Ad

ಕತರ್: ಬೇಡಿಕೆ ಈಡೇರಿಕೆ ಗಡು 48 ಗಂಟೆ ವಿಸ್ತರಣೆ

Update: 2017-07-03 19:45 IST

ರಿಯಾದ್, ಜು. 3: ದಿಗ್ಬಂಧನಗಳನ್ನು ತೆರವುಗೊಳಿಸುವುದಕ್ಕಾಗಿ ತಾವು ಮುಂದಿಟ್ಟಿರುವ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಕತರ್‌ಗೆ ನೀಡಲಾಗಿರುವ ಗಡುವನ್ನು ಸೌದಿ ಅರೇಬಿಯ ಮತ್ತು ಇತರ ಅರಬ್ ದೇಶಗಳು ಸೋಮವಾರ 48 ಗಂಟೆಗಳ ಅವಧಿಗೆ ವಿಸ್ತರಿಸಿವೆ.

 ತಾವು ವಿಧಿಸಿರುವ ದಿಗ್ಬಂಧನಗಳನ್ನು ತೆರವುಗೊಳಿಸಲು ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್‌ಗಳು 13 ಬೇಡಿಕೆಗಳ ಪಟ್ಟಿಯೊಂದನ್ನು ಕತರ್‌ಗೆ ಸಲ್ಲಿಸಿದ್ದವು. ಬೇಡಿಕೆಗಳ ಈಡೇರಿಕೆಗೆ ಈ ದೇಶಗಳು ನೀಡಿರುವ ಮೂಲ ಗಡುವು ರವಿವಾರ ರಾತ್ರಿ ಕೊನೆಗೊಂಡಿದೆ.

ಈ ಹಿನ್ನೆಲೆಯಲ್ಲಿ, ತಮ್ಮ ಬೇಡಿಕೆಗಳಿಗೆ ಕತರ್ ಧನಾತ್ಮಕವಾಗಿ ಸ್ಪಂದಿಸಲು ಸಾಧ್ಯವಾಗುವಂತೆ ಗಡುವನ್ನು ವಿಸ್ತರಿಸಲು ಈ ದೇಶಗಳು ಒಪ್ಪಿವೆ.

ಕೊಲ್ಲಿ ಬಿಕ್ಕಟ್ಟು ನಿವಾರಣೆಗಾಗಿ ಸಂಧಾನಕಾರನ ಪಾತ್ರವನ್ನು ವಹಿಸಿರುವ ಕುವೈತ್ ಅಮೀರ್‌ರ ಮನವಿಯಂತೆ ಸೌದಿ ಅರೇಬಿಯ ನೇತೃತ್ವದ ದೇಶಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ ಎಂದು ಸೌದಿ ಅರೇಬಿಯದ ಅಧಿಕೃತ ಸುದ್ದಿ ಸಂಸ್ಥೆ ಎಸ್‌ಪಿಎ ಪ್ರಕಟಿಸಿದ ಜಂಟಿ ಹೇಳಿಕೆಯೊಂದು ತಿಳಿಸಿದೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಹಾಗೂ ಇರಾನ್ ಜೊತೆಗೆ ಹೆಚ್ಚು ಆತ್ಮೀಯವಾಗಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್‌ಗಳು ಜೂನ್ 5ರಂದು ಎಲ್ಲ ರೀತಿಯ ಸಂಪರ್ಕಗಳನ್ನು ಕಡಿದುಕೊಂಡಿದ್ದವು.

ಜೂನ್ 22ರಂದು ಅವುಗಳು 13 ಅಂಶಗಳ ಬೇಡಿಕೆ ಪಟ್ಟಿಯೊಂದನ್ನು ಕತರ್‌ಗೆ ಸಲ್ಲಿಸಿ, ಬೇಡಿಕೆಗಳ ಈಡೇರಿಕೆಗೆ 10 ದಿನಗಳ ಕಾಲಾವಕಾಶ ನೀಡಿದ್ದವು.

ನಾಳೆ ಕೈರೋದಲ್ಲಿ ಮಾತುಕತೆ

ಕತರ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸುವುದಕ್ಕಾಗಿ ಈಜಿಪ್ಟ್, ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬಹರೈನ್‌ಗಳ ವಿದೇಶ ಸಚಿವರು ಕೈರೋದಲ್ಲಿ ಬುಧವಾರ ಸಭೆ ನಡೆಸಲಿದ್ದಾರೆ ಎಂದು ಈಜಿಪ್ಟ್ ವಿದೇಶ ಸಚಿವಾಲಯದ ವಕ್ತಾರ ಅಹ್ಮದ್ ಅಬು ಝೈದ್ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News