ಮಲಯಾಳಂ ವಿಶ್ವವಿದ್ಯಾನಿಲಯಕ್ಕೆ ಅನಿವಾಸಿ ದೋಹದ "ಬಶೀರ್ ಪ್ರಶಸ್ತಿ"

Update: 2017-07-06 12:48 GMT

ಕಲ್ಲಿಕೋಟೆ, ಜು.6: ಗಲ್ಫ್ ಮಲಯಾಳಿ ಸಾಂಸ್ಕೃತಿಕ ಸಂಘಟನೆ ಪ್ರವಾಸಿ(ಅನಿವಾಸಿ) ದೋಹದ 23ನೆ "ಬಶೀರ್ ಪ್ರಶಸ್ತಿ"ಗೆ ತಿರೂರ್ ಮಲಯಾಳಂ ವಿಶ್ವವಿದ್ಯಾನಿಲಯ ಆಯ್ಕೆಯಾಗಿದೆ ಎಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಅಧ್ಯಕ್ಷರಾಗಿರುವ ಸಮಿತಿ ಪ್ರಶಸ್ತಿಯನ್ನು ನಿರ್ಣಯಿಸಿದೆ. 50 ಸಾವಿರ ರೂ. ಮತ್ತು ನಂಬೂದಿರಿ ರೂಪುನೀಡಿದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಆಗಸ್ಟ್ 26ರಂದು ತುಂಚನ್ ಪರಂಬ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುವುದು.

ಇದುವರೆಗೂ ಪ್ರವಾಸಿ ದೋಹಾ ಸಂಘಟನೆ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುತ್ತಿತ್ತು. ಇದೇ ಮೊದಲ ಸಲ ಸಂಸ್ಥೆಯೊಂದಕ್ಕೆ ಅದು ಪ್ರಶಸ್ತಿ ನೀಡುತ್ತಿದೆ. ಮಲಯಾಳಂ ವಿಶ್ವವಿದ್ಯಾನಿಲಯ ನಾಲ್ಕು ವರ್ಷಗಳ ಚಟುವಟಿಕೆಗಳು ಮಲಯಾಳಂ ಭಾಷೆಯ ಬೆಳವಣಿಗೆಗೆ ಸ್ತುತ್ಯರ್ಹ ಕೊಡುಗೆಯನ್ನು ನೀಡಿದೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ.

ಸಾಹಿತಿ ದಿವಂಗತ ಬಶೀರ್‌ರ ಮಾತೃಭಾಷಾ ಪ್ರೇಮಕ್ಕೆ ಬೆಂಬಲವನ್ನು ಸೂಚಿಸಿ ಪ್ರವಾಸಿ ದೋಹ ಈ ಪ್ರಶಸ್ತಿಯನ್ನು ಅವರ ಸ್ಮರಣೆಯಲ್ಲಿ ನೀಡುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಪ್ರತಿಭಾವಂತ ವಿದ್ಯಾರ್ಥಿಗೆ ಎಂಎನ್. ವಿಜಯನ್ ಸ್ಮಾರಕ ಎಂಡೋವ್‌ಮೆಂಟ್ ಸ್ಕಾಲರ್‌ಶಿಪ್(15,000 ರೂ.) ನೀಡಲಾಗುವುದು ಎಂದು ಪ್ರವಾಸಿ ದೋಹಾದ ಪದಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News