ಸೌದಿಯ ಖಾತಿಫ್‌ನಲ್ಲಿ ಶೂಟೌಟ್: ಪೊಲೀಸ್ ಸಹಿತ ಮೂವರಿಗೆ ಗಾಯ

Update: 2017-07-10 17:17 GMT

ರಿಯಾದ್,ಜು.11: ಸೌದಿ ಆರೇಬಿಯ ಪೂರ್ವ ಪ್ರಾಂತವಾದ ಖಾತಿಫ್ ನಲ್ಲಿ ನಡೆದ ಶೂಟೌಟ್‌ನಲ್ಲಿ ಓರ್ವ ಪೊಲೀಸ್ ಹಾಗೂ ಇಬ್ಬರು ನಾಗರಿಕರು ಗಾಯಗೊಂಡಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

   ಖಾತಿಫ್‌ನಲ್ಲಿ ಕಳೆದ ಒಂದು ವಾರದಲ್ಲಿ ಸರಣಿ ದಾಳಿಗಳು ನಡೆದಿದ್ದು, ಅವುಗಳಲ್ಲಿ ಕೆಲವು ಅತ್ಯಂತ ಮಾರಣಾಂತಿಕವಾಗಿದ್ದವು. ರವಿವಾರದಂದು ಕರ್ತವ್ಯದಲ್ಲಿರದ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಖಾಸಗಿ ಹೊಲದೆಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ಅಜ್ಞಾತ ಬಂಧೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಖಾತಿಫಱ್ನ ಅವಾಮಿಯಾ ಎಂಬಲ್ಲಿ ಸೋಮವಾರ ಬೆಳಗ್ಗೆ ಶಂಕಿತ ಉಗ್ರರ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳ ದೇಹಸ್ಥಿತಿ ಸ್ಥಿರವಾಗಿರುವುದಾಗಿ ಅವರು ಹೇಳಿದ್ದಾರೆ.

ಕಳೆದ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಇನ್ನಿಬ್ಬರು ಪೊಲೀಸರು ಗಾಯಗೊಂಡಿದ್ದರು. ಕಳೆದ ತಿಂಗಳು ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿಗಳಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಗಾಯಗೊಂಡಿದ್ದರು.

 ಈ ಬಾಂಬ್ ದಾಳಿಯ ಘಟನೆಗಳನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಲಾಗುತ್ತಿದ್ದು, ಈ ಪ್ರದೇಶದಲ್ಲಿ ಅಶಾಂತಿ ಸೃಷ್ಟಿಸಲು ಡ್ರಗ್ಸ್ ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರು ಸಂಚುಹೂಡಿದ್ದಾರೆಂದು ಸೌದಿ ಅಧಿಕಾರಿಗಳು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News