ದುಬೈಯ ಜ್ಯುವೆಲ್ಲರಿಯಲ್ಲಿ ಭಾರೀ ದರೋಡೆ: 48 ಗಂಟೆಯೊಳಗೆ ಆರೋಪಿಗಳ ಬಂಧನ

Update: 2017-07-17 09:06 GMT

ದುಬೈ,ಜು.17: ಹಾಡಹಗಲೇ 30ಲಕ್ಷ ದಿರ್ ಹಂ( ಐದುಕಾಲು ಕೋಟಿ ರೂಪಾಯಿ) ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ್ದ ಮುಖವಾಡಧಾರಿ ತಂಡವನ್ನು ದುಬೈ ಪೊಲೀಸರು ಸೆರೆಹಿಡಿದಿದ್ದಾರೆ. ಕಳೆದ ಬುಧವಾರ ಇಂಟರ್‍ನ್ಯಾಶನಲ್ ಸಿಟಿಯಲ್ಲಿರುವ  ಕೇರಳದ ವ್ಯಕ್ತಿಯ ಮಾಲಕತ್ವದ ಚಿಟ್ಟಿಲಪ್ಪಿಳ್ಳಿ ಜ್ಯುವೆಲ್ಲರ್ಸ್‍ನಲ್ಲಿ ದರೋಡೆ ನಡೆದಿತ್ತು.  ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸಲಾಗಿದೆ ಎಂದು ದುಬೈ ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ಲ ಖಲೀಫ ಅಲ್ಲ ಮರಿ  ತಿಳಿಸಿದ್ದಾರೆ.  ಮೂವರು ಆರೋಪಿಗಳು ಅಲ್‍ಐನ್‍ನಲ್ಲಿ ಮತ್ತು ಇಬ್ಬರು ವೈಸ್‍ನಲ್ಲಿ ಅಡಗಿ ಕೂತಿದ್ದರು. ಪೊಲೀಸರು ಅಲ್ಲಿಂದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬುಧವಾರ ಬೆಳಗ್ಗೆ ಹತ್ತುಗಂಟೆಗೆ ದೊಡ್ಡ ಕತ್ತಿಯನ್ನು ಬೀಸುತ್ತ ದರೋಡೆ ತಂಡ ಜ್ಯುವೆಲ್ಲರಿಗೆ ಬಂದಿತ್ತು. ಜ್ಯುವೆಲ್ಲರಿಯ ನೌಕರರಿಗೆ ಕರಿಮೆಣಸು ಸ್ಪ್ರೇ ಪ್ರಯೋಗಿಸಿ ಬಾತ್‍ರೂಮ್‍ನಲ್ಲಿ ಕೂಡಿಹಾಕಿ ದರೋಡೆ ಮಾಡಲಾಗಿದೆ.  ಜ್ಯುವೆಲ್ಲರಿಯ ಆಭರಣ ಪೆಟ್ಟಿಗೆಗಳ ವಿವರಗಳು ಅವರಿಗೆ ಚೆನ್ನಾಗಿ ಗೊತ್ತಿತ್ತು ಎನ್ನುವುದು ಅವರು ದರೋಡೆ ಮಾಡಿದ ರೀತಿಯಲ್ಲಿ ತಿಳಿಯುತ್ತಿತ್ತು ಎಂದು ಅಪರಾಧ ತನಿಖಾ ವಿಭಾಗದ ಉಪಮುಖ್ಯಸ್ಥ ಮೇಜರ್ ಜನರಲ್ ಖಲೀಲ್ ಇಬ್ರಾಹೀಂ ಅಲ್ಲ ಮನ್ಸೂರಿ ಹೇಳಿದ್ದಾರೆ.

ಮುಖವಾಡ ಧರಿಸಿದ್ದ ಆರೋಪಿಗಳು ಯಾವುದೇ ಪುರಾವೆಯನ್ನೂ  ಬಿಡದೆ ಯಶಸ್ವಿಯಾಗಿ ದರೋಡೆ ನಡೆಸಿದ್ದರು. ಆದರೆ ದರೋಡೆ ನಡೆದು 48 ಗಂಟೆಗಳಲ್ಲಿ ಕಳ್ಳರನ್ನು ಬಂಧಿಸಿದ್ದು ಪೊಲೀಸರ ಸಾಧನೆಯಾಗಿದೆ ಎಂದು ಮೇಜರ್ ಜನರಲ್ ಮರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದರೋಡೆ ಕೃತ್ಯ ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ದಾಖಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News