ಸೌದಿ: ಪ್ರವಾಸೋದ್ಯಮ ಉತ್ತೇಜನಕ್ಕೆ 17,037 ಕೋಟಿ ರೂ. ನಿಗದಿ

Update: 2017-07-17 13:54 GMT

ರಿಯಾದ್, ಜು. 17: ಸೌದಿ ಅರೇಬಿಯದಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

‘‘2030ರ ಮುನ್ನೋಟವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಪರಿವರ್ತನೆ ಕಾರ್ಯಕ್ರಮ (ಎನ್‌ಟಿಪಿ) 2020ರ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ (ಎಸ್‌ಸಿಟಿಎಚ್) ಆಯೋಗವು ತನ್ನ ತಂತ್ರೋಪಾಯಗಳನ್ನು ಪುನರ್‌ಪರಿಶೀಲಿಸುತ್ತಿದೆ’’ ಎಂದು ಎಸ್‌ಸಿಟಿಎಚ್‌ನ ವಕ್ತಾರ ಮುಹಮ್ಮದ್ ಅಲ್-ನಶ್ಮಿ ಹೇಳಿದರು.

ಈ ಯೋಜನೆಗಳಿಗೆ 2017ರ ಬಜೆಟ್‌ನಲ್ಲಿ 9.93 ಬಿಲಿಯ ಸೌದಿ ರಿಯಾಲ್ (17,037 ಕೋಟಿ ರೂಪಾಯಿ) ಮೊತ್ತವನ್ನು ಒದಗಿಸಲಾಗಿದೆ.

‘‘ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯವನ್ನು ಸುಲಲಿತಗೊಳಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ’’ ಎಂದು ಎಸ್‌ಸಿಟಿಎಚ್ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಹಜ್ ಮತ್ತು ಉಮ್ರಾಗಳನ್ನೊಳಗೊಂಡ ಧಾರ್ಮಿಕ ಪ್ರವಾಸೋದ್ಯಮವು ಈ ವಲಯದ ಗರಿಷ್ಠ ಆದಾಯ ತರುವ ವಿಭಾಗವಾಗಿದೆ.

ಸೌದಿ ಅರೇಬಿಯದಲ್ಲಿ ಪ್ರವಾಸೋದ್ಯಮವು 2030ರವರೆಗಿನ ಅವಧಿಯಲ್ಲಿ ಸೌದಿ ಪ್ರಜೆಗಳಿಗೆ ಸುಮಾರು 12 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News