ಕತರ್ ಬಿಕ್ಕಟ್ಟು ಇತ್ಯರ್ಥಕ್ಕೆ ಯತ್ನ: ಎರ್ದೊಗಾನ್ ಗಲ್ಫ್ ಪ್ರವಾಸ ಆರಂಭ

Update: 2017-07-24 16:21 GMT

ಕುವೈತ್‌ಸಿಟಿ,ಜು.24: ಕತರ್ ಮೇಲೆ ನಾಲ್ಕು ಅರಬ್ ರಾಷ್ಟ್ರಗಳು ವಿಧಿಸಿರುವ ರಾಜತಾಂತ್ರಿಕ ನಿರ್ಬಂಧಗಳನ್ನು ತೆರವುಗೊಳಿಸುವ ಪ್ರಯತ್ನವಾಗಿ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಬ್ ಎರ್ದೊಗಾನ್ ರವಿವಾರ ಕತರ್ ಸೇರಿದಂತೆ ಐದು ಅರಬ್ ರಾಷ್ಟ್ರಗಳ ಪ್ರವಾಸವನ್ನು ಆರಂಭಿಸಿದ್ದಾರೆ.

   ಎರ್ದೊಗಾನ್, ಕತರ್‌ನೊಂದಿಗೆ ನಾಲ್ಕು ಗಲ್ಫ್ ರಾಷ್ಟ್ರಗಳು ಜೂನ್ 5ರಮಂದು ವಾಣಿಜ್ಯ ಹಾಗೂ ರಾಜತಾಂತ್ರಿಕ ಸಂಪರ್ಕವನ್ನು ಕಡಿದುಕೊಂಡ ಬಳಿಕ, ವಿವಾದವನ್ನು ಬಗೆಹರಿಸಲು ಗಲ್ಫ್ ಪ್ರವಾಸವನ್ನು ಕೈಗೊಂಡ ಐದನೆ ಜಾಗತಿಕ ನಾಯಕರಾಗಿದ್ದಾರೆ.

  ಬ್ರಿಟನ್, ಫ್ರಾನ್ಸ್,ಜರ್ಮನಿ ಹಾಗೂ ಅಮೆರಿಕದ ಉನ್ನತ ರಾಜತಾಂತ್ರಿಕರು ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡಿ, ಕತರ್ ಬಿಕ್ಕಟ್ಟು ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ತೀವ್ರವಾದ ಕಳವಳ ವ್ಯಕ್ತಪಡಿಸಿದ್ದರು.

      ಉಗ್ರರಿಗೆ ಬೆಂಬಲ ನೀಡುತ್ತಿದೆಯೆಂದು ಆರೋಪಿಸಿ ಜೂನ್ ತಿಂಗಳ ಆರಂಭದಲ್ಲಿ ಗಲ್ಫ್ ರಾಷ್ಟ್ರಗಳಾದ ಸೌದಿ ಆರೇಬಿಯ, ಯುಎಇ, ಈಜಿಪ್ಟ್ ಹಾಗೂ ಬಹರೈನ್ ದೇಶಗಳು ಕತರ್ ವಿರುದ್ಧ ರಾಜತಾಂರಿಕ ಹಾಗೂ ಸಾರಿಗೆ ಸಂಪರ್ಕಗಲನ್ನು ಕಡಿದುಕೊಂಡಿದ್ದವು. ಆದರೆ ತನ್ನ ಮೇಲಿನ ಆರೋಪವನ್ನು ಕತರ್ ಬಲವಾಗಿ ತಳ್ಳಿಹಾಕಿದೆ.

  ಸೌದಿ ಆರೇಬಿಯ ಭೇಟಿಯೊಂದಿಗೆ ತನ್ನ ಗಲ್ಫ್ ಪ್ರವಾಸನ್ನು ಆರಂಭಿಸಿದ ಎರ್ದೊಗಾನ್, ಜಿದ್ದಾ ನಗರದಲ್ಲಿ ದೊರೆ ಸಲ್ಮಾನ್ ಹಾಗೂ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಜೊತೆ ಮಾತುಕತೆ ನಡೆಸಿದರು. ಸೌದಿ ಆರೇಬಿಯಕ್ಕೆ ಆಗಮಿಸುವ ಮುನ್ನ ಅವರು ಕುವೈತ್‌ನ ಅಮೀರ್ ಶೇಖ್ ಸಭಾ ಅಲ್ ಅಹ್ಮದ್ ಅಲ್ ಸಭಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.

   ಇತ್ತೀಚಿನ ವರ್ಷಗಳಲ್ಲಿ ಟರ್ಕಿಯು ಸೇನಾ ನಿಯೋಜನೆ ಸೇರಿದಂತೆ ಕತರ್ ಜೊತೆಗಿನ ಬಾಂಧವ್ಯವನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ರ್ಷಿಯನ್ ಕೊಲ್ಲಿಯಲ್ಲಿ ಟರ್ಕಿಯ ಪ್ರಪ್ರಥಮ ಸೇನಾ ನೆಲೆಯನ್ನು ಸ್ಥಾಪಿಸುವ ಯೋಜನೆಯನ್ನು 2015ರಲ್ಲಿ ಟರ್ಕಿ ಹಾಗೂ ಕತರ್ ಜಂಟಿಯಾಗಿ ಪ್ರಕಟಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News