ಐ.ಎಸ್.ಎಫ್. ನೆರವು: ಕುವೈತ್ ನಲ್ಲಿ ಮೃತಪಟ್ಟ ನಾಲ್ವರು ಅನಿವಾಸಿ ಭಾರತೀಯರ ಮೃತದೇಹ ತವರಿಗೆ

Update: 2017-07-30 14:11 GMT

ಕುವೈತ್, ಜು.30: ಉದ್ಯೋಗ ಅರಸಿ ಕುವೈತ್ ಗೆ ತೆರಳಿ ಅಲ್ಲೇ ಮೃತಪಟ್ಟ ನಾಲ್ವರು ಭಾರತೀಯರ ಮೃತದೇಹಗಳನ್ನು ಊರಿಗೆ ತರಲು ಇಂಡಿಯನ್ ಸೋಶಿಯಲ್ ಫೋರಮ್ (ಐ.ಎಸ್.ಎಫ್.) ಕುವೈಟ್, ಕರ್ನಾಟಕ ಘಟಕವು ನೆರವಾಗಿದೆ. ಮತ್ತೋರ್ವ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಕುಟುಂಬಸ್ಥರ ವಿನಂತಿಯಂತೆ ಕುವೈತ್ ನಲ್ಲಿ ನಡೆಸಲಾಗಿದೆ ಎಂದು ಐ.ಎಸ್.ಎಫ್. ಪ್ರಕಟನೆ ತಿಳಿಸಿದೆ.

ಬೆಂಗಳೂರು ಮೂಲದ ಸೊಸಾಲಿ ಪಾರ್ಥ ಸಾರಥಿ ಶ್ರೀನಿವಾಸ್(65) ಎಂಬವರು ಕುವೈತ್ ಗೆ ಬಂದು ನೆಲೆಸಿದ್ದರು. ಅರಬಿ ಎನರ್ಟೆಕ್ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಅವರು ಕುವೈತ್ ನಲ್ಲಿಯೇ ತನ್ನ ನಿವೃತ್ತ ಜೀವನವನ್ನು ನಡೆಸುತ್ತಿದ್ದರು. ವೃದ್ಧಾಪ್ಯ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಜುಲೈ 2ರಂದು ನಿಧನರಾದರು. ಭಾರತೀಯ ದೂತವಾಸ ಕಚೇರಿಯ ವಿನಂತಿಯ ಮೇರೆಗೆ ಧಾವಿಸಿದ ಐ.ಎಸ್.ಎಫ್. ತಂಡ ನಿರಂತರ ಪ್ರಯತ್ನದಿಂದ ಜುಲೈ 4ರಂದು ಮೃತದೇಹವನ್ನು ಊರಿಗೆ ಕಳುಹಿಸುವಲ್ಲಿ ನೆರವಾಯಿತು ಎಂದು ಐ.ಎಸ್.ಎಫ್. ತಿಳಿಸಿದೆ.

ಐಎಸ್ ಎಫ್ ಪ್ರಕಟನೆ ತಿಳಿಸಿದಂತೆ, ಇನ್ನೊಂದು ಪ್ರಕರಣದಲ್ಲಿ ಬೆಂಗಳೂರು ಮೂಲದ ಖಾದರ್ ಶರೀಫ್ ಜೌಹರ್ (64)  45 ದಿನಗಳಿಂದ ಕುವೈತ್ ಕ್ಯಾನ್ಸರ್ ನಿಯಂತ್ರಣ ಕೇಂದ್ರದಲ್ಲಿ ಕಿಮಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಜುಲೈ 15ರಂದು ಕೊನೆಯುಸಿರೆಳೆದರು. ಕುವೈತ್ ನಲ್ಲಿ ನೆಲೆಸಿರುವ ಮೃತರ ಕುಟುಂಬಸ್ಥರ ನೆರವಿನೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರು ಕುವೈತ್ ನ ಸುಲೈಬಿಕಾಟ್ ದಫನಭೂಮಿಯಲ್ಲಿ ಶರೀಫ್ ಜೌಹರ್ ರ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.

ಕಲಬುರಗಿ ಮೂಲದ ಸೈಯದ್ ಅಮ್ಜದ್ ಅಲಿಯವರು 7 ತಿಂಗಳಿನಿಂದ ಕುವೈತ್ ನ ಮನೆಯೊಂದರಲ್ಲಿ ಹೌಸ್ ಬಾಯ್ ಆಗಿ ದುಡಿಯುತ್ತಿದ್ದರು. ಇತ್ತೀಚೆಗಷ್ಟೇ ಊರಿನಿಂದ ಬಂದಿದ್ದ ಇವರು ಜುಲೈ 7ರಂದು ಮಧ್ಯಾಹ್ನ ತನ್ನ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅಮ್ಜದ್ ರನ್ನು ಪ್ರಾಯೋಜಕರು ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಕಲಬುರಗಿ ಎಸ್.ಡಿ.ಪಿ.ಐ. ನಾಯಕರಿಂದ ವಿಷಯವನ್ನರಿತ ಇಂಡಿಯನ್ ಸೋಶಿಯಲ್ ಫೋರಮ್ ನಾಯಕರು ಸ್ಥಳೀಯ ಪೋಲಿಸ್ ಠಾಣೆಯನ್ನು ಸಂಪರ್ಕಿಸಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜುಲೈ 17ರಂದು ಹೈದರಾಬಾದ್ ಮುಖಾಂತರ ಮೃತದೇಹವನ್ನು ಗುಲ್ಬರ್ಗಕ್ಕೆ ತಲುಪಿಸಲಾಯಿತು ಎಂದು ಪ್ರಕಟನೆಯಲ್ಲಿ ಐ.ಎಸ್.ಎಫ್. ತಿಳಿಸಿದೆ.

ಮಂಗಳೂರಿನ ಬಜ್ಪೆಯವರಾದ ಅಬ್ದುಲ್ ಹಮೀದ್ ಉಸ್ಮಾನ್ ಹೃದಯಾಘಾತದಿಂದ ಕುವೈತ್ ನಲ್ಲಿ ಜುಲೈ 22ರಂದು ನಿಧನರಾಗಿದ್ದರು. ಇಂಡಿಯನ್ ಸೋಶಿಯಲ್ ಫೋರಮ್ ತಂಡವು ಕೆಕೆಎಂಎ ಕರ್ನಾಟಕ ವಿಭಾಗ ನಾಯಕ ಅಬ್ದುಲ್ ಲತೀಫ್ ಮತ್ತು ಮೃತರ ಇತರ ಗೆಳೆಯರ ಸಹಕಾರದೊಂದಿಗೆ ಅದೇ ದಿನ ಮೃತದೇಹವನ್ನು ಊರಿಗೆ ರವಾನಿಸಿದರು ಎಂದು ಐ.ಎಸ್.ಎಫ್. ಹೇಳಿದೆ.

ಅಸ್ಸಾಂನ ಮುಹಮ್ಮದ್ ಇನ್ತಾಝ್ ಅಲಿ(38) ಲಂಕಾ ನಗಾವ್ ಮೂಲದವರಾಗಿದ್ದು ಕುವೈತ್ ನಲ್ಲಿ ಬಡಗಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಜುಲೈ 19ರಂದು ಹೃದಯಾಘಾತದಿಂದ ಮರಣ ಹೊಂದಿದ್ದರು. ಭಾರತೀಯ ರಾಯಭಾರ ಕಚೇರಿಯ ನೆರವಿನೊಂದಿಗೆ ಇನ್ತಾಝ್ ಅಲಿರವರ ಮೃತದೇಹವನ್ನು ಹುಟ್ಟೂರು ಅಸ್ಸಾಂಗೆ ತಲುಪಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ತಂಡವು ಸಫಲವಾಗಿದೆ ಎಂದು ಸಂಘಟನೆಯ ಪ್ರಕಟನೆ ತಿಳಿಸಿದೆ.

ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಅಧ್ಯಕ್ಷ ಇಮ್ತಿಯಾಝ್ ಅಹ್ಮದ್ ಅರ್ಕುಳ, ಐ.ಎಸ್.ಎಫ್. ವೆಲ್ಫೇರ್ ಮೀಡಿಯೇಟ್ಸ್ ತಂಡದ ಸದಸ್ಯರಾದ ರಫೀಕ್ ಮಂಚಿ, ಫೈಝಲ್ ಬೆಳಪು, ತಮೀಮ್ ಉಳ್ಳಾಲ್, ಮುಸ್ತಕೀಮ್ ಶಿರೂರ್ ಹಾಗೂ ಇಮ್ರಾನ್ ಮುಲ್ಕಿ ಮೊದಲಾದವರು ಮೃತದೇಹಗಳನ್ನು ತವರಿಗೆ ಕಳುಹಿಸುವಲ್ಲಿ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News