ಹಜ್ ಅಂತಾರಾಷ್ಟ್ರೀಕರಣದ ಆಗ್ರಹ ಸೌದಿ ವಿರುದ್ಧ ಘೋಷಿಸಿದ ಯುದ್ಧ: ವಿದೇಶ ಸಚಿವ

Update: 2017-07-31 15:05 GMT

ರಿಯಾದ್, ಜು.31: ಹಜ್ ಯಾತ್ರೆಯನ್ನು ಅಂತಾರಾಷ್ಟ್ರೀಕರಣಗೊಳಿಸಬೇಕೆಂಬ ಕತರ್‌ನ ಬೇಡಿಕೆಯು ಸೌದಿ ಅರೇಬಿಯಾ ವಿರುದ್ಧ ಘೋಷಿಸಿದ ಸಮರವಾಗಿದೆ ಎಂದು ಸೌದಿಯ ವಿದೇಶ ಸಚಿವ ಆದಿಲ್ ಅಲ್-ಜುಬೈರ್ ಹೇಳಿದ್ದಾರೆ ಎಂದು ಸೌದಿ ಒಡೆತನದ ಅಲ್ ಅರೇಬಿಯ ಟೆಲಿವಿಶನ್ ರವಿವಾರ ವರದಿ ಮಾಡಿದೆ

ಆದರೆ, ತಾನು ಇಂತಹ ಬೇಡಿಕೆಯನ್ನೇ ಇಟ್ಟಿಲ್ಲ ಎಂದು ಕತರ್ ಹೇಳಿದೆ.

‘‘ಪವಿತ್ರ ಸ್ಥಳಗಳನ್ನು ಅಂತಾರಾಷ್ಟ್ರೀಕರಣಗೊಳಿಸಬೇಕೆಂಬ ಕತರ್‌ನ ಬೇಡಿಕೆಯು ಆಕ್ರಮಣಕಾರಿಯಾಗಿದೆ ಹಾಗೂ ಸೌದಿ ಅರೇಬಿಯ ವಿರುದ್ಧ ಯುದ್ಧ ಘೋಷಣೆಯಾಗಿದೆ’’ ಎಂದು ಸೌದಿ ವಿದೇಶ ಸಚಿವರು ಹೇಳಿರುವುದಾಗಿ ‘ಅಲ್ ಅರೇಬಿಯ’ ವೆಬ್‌ಸೈಟ್ ಹೇಳಿದೆ.

‘‘ಈ ಪವಿತ್ರ ಸ್ಥಳಗಳನ್ನು ಅಂತಾರಾಷ್ಟ್ರೀಕರಣಗೊಳಿಸಲು ಯತ್ನಿಸುತ್ತಿರುವ ಯಾರಿಗೇ ಆದರೂ ಪ್ರತಿಕ್ರಿಯೆ ನೀಡುವ ನಮ್ಮ ಹಕ್ಕನ್ನು ಕಾದಿರಿಸಿದ್ದೇವೆ’’ ಎಂದು ಅಲ್-ಜುಬೈರ್ ಹೇಳಿದ್ದಾರೆ ಎನ್ನಲಾಗಿದೆ.

ಆದರೆ, ತನ್ನ ದೇಶದ ಯಾವುದೇ ಅಧಿಕಾರಿ ಇಂತಹ ಬೇಡಿಕೆಯನ್ನು ಮುಂದಿಟ್ಟಿಲ್ಲ ಎಂದು ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್-ತಾನಿ ಹೇಳಿದರು.

‘‘ಈ ತಪ್ಪು ಮಾಹಿತಿ ಮತ್ತು ಸುದ್ದಿ ಎಲ್ಲಿಂದ ಬಂತೋ ನಮಗೆ ಗೊತ್ತಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿ ನಮಗೆ ಸಾಕಾಗಿದೆ’’ ಎಂದು ಶೇಖ್ ಮುಹಮ್ಮದ್ ‘ಅಲ್ ಜಝೀರ ಟಿವಿ’ಗೆ ಹೇಳಿದರು.

ಧಾರ್ಮಿಕ ಸ್ವಾತಂತ್ರ ಪ್ರತಿಪಾದಿಸಿದ್ದ ಕತರ್:  ಸೌದಿ ಅರೇಬಿಯ ಹಜ್ಜನ್ನು ರಾಜಕೀಯಗೊಳಿಸುತ್ತಿದೆ ಎಂಬುದಾಗಿ ಕತರ್ ಶನಿವಾರ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ. ಅದೇ ವೇಳೆ, ಈ ವರ್ಷ ಹಜ್‌ನಲ್ಲಿ ಭಾಗವಹಿಸಲು ಬಯಸಿರುವ ಕತರ್ ಪ್ರಜೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಅದು ವಿಶ್ವಸಂಸ್ಥೆಯ ವಿಶೇಷ ರಾಯಭಾರಿಗೆ ಮನವಿ ಸಲ್ಲಿಸಿತ್ತು ಹಾಗೂ ಧಾರ್ಮಿಕ ಸ್ವಾತಂತ್ರವನ್ನು ಪ್ರತಿಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News