ಇಟಲಿಯಿಂದ 7 ಯುದ್ಧ ನೌಕೆ ಖರೀದಿ: ಕತರ್ ಘೋಷಣೆ

Update: 2017-08-02 17:00 GMT

ದೋಹಾ (ಕತರ್), ಆ. 2: ಇಟಲಿಯಿಂದ ಏಳು ಯುದ್ಧ ನೌಕೆಗಳನ್ನು ಪಡೆದುಕೊಳ್ಳಲು 5 ಬಿಲಿಯ ಯುರೊ (ಸುಮಾರು 37,705 ಕೋಟಿ ರೂಪಾಯಿ) ಮೊತ್ತದ ಬೇಡಿಕೆ ಸಲ್ಲಿಸಿರುವುದಾಗಿ ಕತರ್ ಬುಧವಾರ ಘೋಷಿಸಿದೆ.

ಕೊಲ್ಲಿಯ ತನ್ನ ನೆರೆ ದೇಶಗಳೊಂದಿಗೆ ಅದು ಹೊಂದಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅದರ ಈ ಕ್ರಮ ಮಹತ್ವ ಪಡೆದುಕೊಂಡಿದೆ.

‘‘ಇಟಲಿಯಿಂದ ಏಳು ಯುದ್ಧ ನೌಕೆಗಳನ್ನು ಪಡೆದುಕೊಳ್ಳುವುದಕ್ಕಾಗಿ ಕತರ್ ನೌಕಾಪಡೆಯ ಪರವಾಗಿ 5 ಬಿಲಿಯ ಯುರೊ ಕರಾರಿಗೆ ಸಹಿ ಹಾಕಿದ್ದೇವೆ’’ ಎಂದು ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್-ತನಿ ದೋಹಾದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕತರ್ ಭೇಟಿಯಲ್ಲಿರುವ ಇಟಲಿ ವಿದೇಶ ಸಚಿವ ಆ್ಯಂಜಲಿನೊ ಅಲ್ಫಾನೊ ಉಪಸ್ಥಿತರಿದ್ದರು.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಜೂನ್ ತಿಂಗಳಲ್ಲಿ ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದ್ದವು.

ಈ ಆರೋಪವನ್ನು ನಿರಾಕರಿಸಿರುವ ಕತರ್, ತನ್ನ ನೆರೆಯ ದೇಶಗಳು ಮುತ್ತಿಗೆ ಹಾಕಿವೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News