ಜಿಎಂಯುಗೆ ಸೌದಿ ಕಾನ್ಸುಲೇಟ್ ನಿಯೋಗದ ಭೇಟಿ

Update: 2017-08-02 18:11 GMT

ದುಬೈ,ಆ.2: ಸೌದಿ ಅರೇಬಿಯಾದ ಕಾನ್ಸುಲೇಟ್‌ನಲ್ಲಿ ಸಾಂಸ್ಕೃತಿಕ ಅಧಿಕಾರಿ ಯಾಗಿರುವ ಮುಸದ್ ಬಿನ್ ಅಹ್ಮದ್ ಅಲ್-ಜರ್ರಾ ಅವರ ನೇತೃತ್ವದ ಸೌದಿ ಅರೇಬಿಯಾ ನಿಯೋಗವು ಇತ್ತೀಚೆಗೆ ಯುಎಇಯ ಅಜ್ಮಾನ್‌ನಲ್ಲಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿ(ಜಿಎಂಯು)ಗೆ ಭೇಟಿ ನೀಡಿತ್ತು.

ನಿಯೋಗವನ್ನು ಬರಮಾಡಿಕೊಂಡ ಚಾನ್ಸಲರ್ ಪ್ರೊಫೆಸರ್ ಹೋಸ್ಸಮ್ ಹಾಮ್ದಿ ನೇತೃತ್ವದ ಶೈಕ್ಷಣಿಕ ತಂಡವು ಜಿಎಂಯುದ ದೂರದೃಷ್ಟಿ, ಅದರ ಗುರಿ ಮತ್ತು ವ್ಯೂಹಾತ್ಮಕ ಉದ್ದೇಶಗಳ ಬಗ್ಗೆ ಮಾಹಿತಿಗಳನ್ನು ಒದಗಿಸಿತು. ಕ್ಯಾಂಪಸ್‌ನಲ್ಲಿಯ ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳಿಗೆ ನಿಯೋಗವು ಭೇಟಿ ನೀಡಿತು.

ಜಿಎಂಯುದ ಅತ್ಯಾಧುನಿಕ ಬೋಧನಾ ರೀತಿ, ತರಬೇತಿ ಸೌಲಭ್ಯ ಮತ್ತು ಉಪಕರಣಗಳ ಬಗ್ಗೆ ನಿಯೋಗವು ಪ್ರಶಂಸೆ ವ್ಯಕ್ತಪಡಿಸಿತು. ಪ್ರದೇಶದಲ್ಲಿ ಖಾಸಗಿ ಕ್ಷೇತ್ರದಲ್ಲಿ ಸರ್ವಪ್ರಥಮವಾದ ಸಂಪೂರ್ಣ ಶೈಕ್ಷಣಿಕ ಆರೋಗ್ಯ ವ್ಯವಸ್ಥೆಯನ್ನು ಸ್ಥಾಪಿಸುವ ಜಿಎಂಯುದ ಪ್ರಯತ್ನಗಳನ್ನೂ ನಿಯೋಗವು ಶ್ಲಾಘಿಸಿತು.

ಸೌದಿ ಅರೇಬಿಯಾದ ಶಿಕ್ಷಣ ಸಚಿವಾಲಯ ಮತ್ತು ಜಿಎಂಯು ನಡುವೆ ಸಹಭಾಗಿತ್ವ ಸಾಧ್ಯತೆಯ ಬಗ್ಗೆ ಈ ಸಂದರ್ಭ ಚರ್ಚೆಗಳು ನಡೆದವು. ಇಂತಹ ಸಹಭಾಗಿತ್ವದಿಂದ ಸೌದಿ ಅರೇಬಿಯಾದ ಹೆಚ್ಚಿನ ವಿದ್ಯಾರ್ಥಿಗಳು ಜಿಎಂಯು ಅಧೀನದ ವಿವಿಧ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ.

ದೇಶದ ಆರೋಗ್ಯ ಕ್ಷೇತ್ರಕ್ಕೆ ಯುವ ಸೌದಿ ಪದವೀಧರರನ್ನು ಒದಗಿಸುವಲ್ಲಿ ಜಿಎಂಯುದ ಕೊಡುಗೆಯ ಬಗ್ಗೆ ಮುಸದ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಮುಸದ್ ಅವರು ನೀಡಿದ ಸಲಹೆಗಳನ್ನು ಸ್ವೀಕರಿಸಿದ ಪ್ರೊ.ಹೋಸ್ಸಮ್ ಅವರು ಸೌದಿ ಅರೇಬಿಯಾದ ಹೆಚ್ಚಿನ ವಿವಿಗಳೊಂದಿಗೆ ಸಹಕಾರದ ಇನ್ನಷ್ಟು ಕ್ಷೇತ್ರಗಳನ್ನು ಅನ್ವೇಷಿಸುವ ಜಿಎಂಯುದ ಆಸಕ್ತಿಯನ್ನು ವ್ಯಕ್ತಪಡಿಸಿದರು ಎಂದು ಪ್ರಕಟಣೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News