ದುಬೈ ವಸತಿಕಟ್ಟಡದಲ್ಲಿ ಅಗ್ನಿ ಆಕಸ್ಮಿಕ: ಭರದ ಪರಿಹಾರ ಕಾರ್ಯಾಚರಣೆ

Update: 2017-08-05 17:47 GMT

ದುಬೈ,ಆ.5: ಶುಕ್ರವಾರ ಭಾರೀ ಅಗ್ನಿ ದುರಂತಕ್ಕೆ ಸಾಕ್ಷಿಯಾದ ದುಬೈನ ಮರೀನಾ ದಲ್ಲಿರುವ ಟಾರ್ಚ್ ಟವರ್ ವಸತಿಕಟ್ಟಡದಲ್ಲಿ ಪರಿಹಾರ ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿದ್ದು, ಅಲ್ಲಿನ ನಿವಾಸಿಗಳಿಗೆ ತಮ್ಮ ಸೊತ್ತುಗಳನ್ನು ಸಂಗ್ರಹಿಸುವುದಕ್ಕಾಗಿ ಅವರ ಅಪಾರ್ಟ್‌ಮೆಂಟ್‌ಗಳಿಗೆ ತೆರಳಲು ಅನುಮತಿ ನೀಡಲಾಗಿದೆ.

 ಔಷಧಿಯ ಅಗತ್ಯವುಳ್ಳ ಗರ್ಭಿಣಿಯರು ಹಾಗೂ ಕುಟುಂಬಗಳು, ಪ್ರಯಾಣಿಕ ಪಾಸ್‌ಪೋರ್ಟ್‌ಗಳು ಮತ್ತಿತರ ದಾಖಲೆಗಳನ್ನು ಹೊಂದಿರುವವರಿಗೆ ಮುಂದಿನ 24 -48 ತಾಸುಗಳೊಳಗೆ ಕಟ್ಟಡವನ್ನು ಪ್ರವೇಶಿಸಲು ಆದ್ಯತೆ ನೀಡುವುದಾಗಿ ಕಿಂಗ್‌ಫೀಲ್ಡ್ ಓನರ್ಸ್‌ ಅಸೋಸಿಯೇಶನ್‌ನ ಆಡಳಿತ ವಿಭಾಗವು ತಿಳಿಸಿದೆ.

70ನೆ ಅಂತಸ್ತಿನವರೆಗಿನ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಿಗೆ ಅವರ ಅಮೂಲ್ಯವಾದ ಮತ್ತು ತುರ್ತುಅಗತ್ಯದ ಸೊತ್ತುಗಳನ್ನು ಸಂಗ್ರಹಿಸುವುದಕ್ಕಾಗಿ,ತಮ್ಮ ನಿವಾಸಕ್ಕೆ ತೆರಳಲು ಅಧಿಕಾರಿಗಳು ಅವಕಾಶ ನೀಡಿದ್ದರು. 80ನೆ ಅಂತಸ್ತಿನವರೆಗಿನ ನಿವಾಸಿಗಳಿಗೂ ಸೊತ್ತುಗಳನ್ನು ಸಂಗ್ರಹಿಸಲು ಅವಕಾಶ ನೀಡಲಾಗುವುದು ಎಂದು ಆಡಳಿತವಿಭಾಗದ ವಿಜ್ಞಾಪನಾಪತ್ರವು ತಿಳಿಸಿದೆ.

 ಅಗ್ನಿಆಕಸ್ಮಿಕದ ಬಳಿಕ ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ದುಬೈ ಮರೀನಾದ ಸುತ್ತಮುತ್ತಲಿನ ಮೂರು ಹೊಟೇಲ್‌ಗಳಲ್ಲಿ ವಸತಿ ವ್ಯವಸ್ಥೆಯನ್ನು ಏರ್ಪಡಿಸಿತ್ತು. ಈ ಮಧ್ಯೆ ಅಗ್ನಿಅನಾಹುತಕ್ಕೀಡಾದ ಟಾರ್ಚ್ ಟವರ್‌ನಲ್ಲಿ ನೀರುಪೂರೈಕೆ, ಅಗ್ನಿಶಾಮಕ ಸೇವೆ ಇತ್ಯಾದಿ ಮೂಲಸೌಕರ್ಯಗಳನ್ನು ಮರುಸ್ಥಾಪಿಸಲಾಗಿದೆಯೆಂದು ಆಡಳಿತ ಮಂಡಳಿಯು ತಿಳಿಸಿದೆ.

ಈ ಮಧ್ಯೆ ದುಬೈ ಪೊಲೀಸ್ ಇಲಾಖೆಯ ಸಿಐಡಿದಳದ ವರಿಷ್ಠರಾದ ಬ್ರಿಗೇಡಿಯರ್ ಖಲೀಲ್ ಅಲ್ ಮನ್ಸೂರಿ ಅವರು ವಸತಿಕಟ್ಟಡದಲ್ಲಿ ಅಗ್ನಿದುರಂತದ ಕಾರಣವನ್ನು ಕಂಡುಹಿಡಿಯಲು ತಜ್ಞರ ತಂಡವೊಂದು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆಯೆಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News