ವಿದೇಶೀಯರ ಕೆಲಸದ ಪರ್ಮಿಟ್ ಶುಲ್ಕದಲ್ಲಿ ಏರಿಕೆ ಇಲ್ಲ: ಸೌದಿ ಅರೇಬಿಯ

Update: 2017-08-07 14:11 GMT

ಜಿದ್ದಾ (ಸೌದಿ ಅರೇಬಿಯ), ಆ. 7: ವಿದೇಶೀಯರ ಕೆಲಸದ ಪರ್ಮಿಟ್ ಶುಲ್ಕದಲ್ಲಿ ಏರಿಕೆಯಾಗಿಲ್ಲ ಎಂದು ಸೌದಿ ಅರೇಬಿಯದ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ವಿಷಯಕ್ಕೆ ಸಂಬಂಧಿಸಿ ಸಚಿವಾಲಯದ ಯಾವುದೇ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ‘ಸೌದಿ ಗಝೆಟ್’ ವರದಿ ಮಾಡಿದೆ.

‘ನಿತಾಕತ್’ ಕಾರ್ಯಕ್ರಮದನ್ವಯ ನೂತನ ಸೌದೀಕರಣ ಪ್ರಮಾಣವನ್ನು ಸಚಿವಾಲಯವು ಸೆಪ್ಟಂಬರ್ 3ರಿಂದ ಜಾರಿಗೆ ತರಲಿದೆ.

ಕಾರ್ಮಿಕ ಸಚಿವಾಲಯವು 2012 ನವೆಂಬರ್ 15ರಂದು ವಿದೇಶೀಯರ ಕೆಲಸದ ಪರ್ಮಿಟ್‌ಗಳ ಮೇಲಿನ ಶುಲ್ಕವನ್ನು ಹೆಚ್ಚಿಸಿತ್ತು ಹಾಗೂ ಎಲ್ಲ ಖಾಸಗಿ ಕ್ಷೇತ್ರದ ಕಂಪೆನಿಗಳಿಂದ ತಿಂಗಳಿಗೆ 200 ಸೌದಿ ರಿಯಾಲ್ (ಸುಮಾರು 3,404 ರೂಪಾಯಿ) ವಸೂಲು ಮಾಡಿತ್ತು ಎಂದು ‘ಓಕಝ್ ಅರೇಬಿಕ್’ ದೈನಿಕವನ್ನು ಉಲ್ಲೇಖಿಸಿ ಸೌದಿ ಗಝೆಟ್ ವರದಿ ಮಾಡಿದೆ.

ಅದೇ ವೇಳೆ, ಮನೆಗೆಲಸಗಾರರಿಗೆ ನೀಡುವ ವೀಸಾ ಶುಲ್ಕದಲ್ಲಿ ಯಾವುದೇ ಏರಿಕೆಯಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಸೌದಿ ಅರೇಬಿಯದ ವಿವಿಧ ಭಾಗಗಳಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆಯ 52,898 ಪ್ರಕರಣಗಳನ್ನು ಪರಿಶೀಲನಾ ಅಭಿಯಾನದ ವೇಳೆ ಪತ್ತೆಹಚ್ಚಲಾಗಿದೆ ಎಂದು ಸಚಿವಾಲಯ ಹೇಳಿದೆ.

 2016 ಅಕ್ಟೋಬರ್ 2ರಿಂದ ಈ ವರ್ಷದ ಜುಲೈ 23ರವರೆಗೆ ಖಾಸಗಿ ವಲಯದ ಉದ್ದಿಮೆಗಳಿಗೆ 1,41,827 ಬಾರಿ ಭೇಟಿ ನೀಡಿದ ಬಳಿಕ ಕಾರ್ಮಿಕ ಇನ್ಸ್‌ಪೆಕ್ಟರ್‌ಗಳು ಈ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ ಎಂದು ಸಚಿವಾಲಯ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News