120 ವಲಸಿಗರನ್ನು ಸಮುದ್ರಕ್ಕೆ ಎಸೆದ ಕಳ್ಳಸಾಗಣಿಕೆದಾರರು: 29 ಮಂದಿ ಸಾವು; 22 ನಾಪತ್ತೆ

Update: 2017-08-10 16:19 GMT

ದುಬೈ, ಆ. 10: ಕಳ್ಳಸಾಗಾಣಿಕೆದಾರರು ಬುಧವಾರ ಯಮನ್ ತೀರದ ಸಮುದ್ರದಲ್ಲಿ 120ಕ್ಕೂ ಅಧಿಕ ಸೊಮಾಲಿ ಮತ್ತು ಇತಿಯೋಪಿಯನ್ ವಲಸಿಗರನ್ನು ಸಮುದ್ರಕ್ಕೆ ಎಸೆದು ಪರಾರಿಯಾಗಿದ್ದಾರೆ. ಈ ಪೈಕಿ 29 ಮಂದಿ ಮೃತಪಟ್ಟಿದ್ದಾರೆ ಹಾಗೂ 22 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗ ಸಂಘಟನೆ (ಐಒಎಂ) ಹೇಳಿದೆ.

ಘಟನೆಯಲ್ಲಿ ಬದುಕುಳಿದವರು ಶಬ್ವ ಪ್ರಾಂತದ ಸಮುದ್ರ ತೀರದಲ್ಲಿ 29 ವಲಸಿಗರನ್ನು ಹೂತಿದ್ದಾರೆ ಎಂದು ಐಒಎಂ ತಿಳಿಸಿದೆ.

‘‘ಕಳ್ಳಸಾಗಾಣಿಕೆದಾರರು ಉದ್ದೇಶಪೂರ್ವಕವಾಗಿಯೇ ವಲಸಿಗರನ್ನು ಸಮುದ್ರಕ್ಕೆ ನೂಕಿದ್ದಾರೆ. ಸಮುದ್ರ ತೀರಕ್ಕೆ ವಲಸಿಗರನ್ನು ತಲುಪಿಸಿದರೆ ಅಧಿಕಾರಿಗಳು ತಮ್ಮನ್ನು ಹಿಡಿಯಬಹುದು ಎಂಬ ಹೆದರಿಕೆಯಿಂದ ಅವರು ಹೀಗೆ ಮಾಡಿದ್ದಾರೆ’’ ಎಂದು ಐಒಎಂ ತುರ್ತು ಪರಿಸ್ಥಿತಿ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಈ ಕಳ್ಳಸಾಗಾಣಿಕೆದಾರರು ಬಳಿಕ ಮತ್ತಷ್ಟು ವಲಸಿಗರನ್ನು ಮತ್ತೆ ಯಮನ್‌ಗೆ ಸಾಗಿಸಲು ತಾವು ಬಂದ ಸ್ಥಳಕ್ಕೆ ಹಿಂದಿರುಗಿದ್ದಾರೆ’’ ಎಂದರು.

ಈ ವರ್ಷದಲ್ಲಿ ಸುಮಾರು 55,000 ವಲಸಿಗರು ಹಾರ್ನ್ ಆಫ್ ಆಫ್ರಿಕದಿಂದ ಯಮನ್‌ನತ್ತ ಬಂದಿದ್ದಾರೆ. ಕೊಲ್ಲಿ ದೇಶಗಳಲ್ಲಿ ಉದ್ಯೋಗಳನ್ನು ಅರಸುವುದು ಅವರಲ್ಲಿ ಹೆಚ್ಚಿನವರ ಉದ್ದೇಶವಾಗಿದೆ.

ಹಿಂದೂ ಮಹಾಸಾಗರದಲ್ಲಿ ವರ್ಷದ ಈ ಅವಧಿಯಲ್ಲಿ ಪ್ರಬಲ ಬಿರುಗಾಳಿ ಇರುವುದರಿಂದ ಪ್ರಯಾಣ ಅಪಾಯಕಾರಿಯಾಗಿರುತ್ತದೆ.

ಮೃತಪಟ್ಟಿರುವವರಲ್ಲಿ ಹಾಗೂ ನಾಪತ್ತೆಯಾಗಿರುವವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಐಒಎಂ ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News