ಕುವೈತ್: ಸಮುದ್ರದಲ್ಲಿ ಭಾರೀ ತೈಲ ಸೋರಿಕೆ

Update: 2017-08-13 16:23 GMT

ಕುವೈತ್‌ನಗರ,ಆ.13: ಕುವೈತ್ ನಗರವು 30 ಶತಕೋಟಿ ಡಾಲರ್ ವೆಚ್ಚದಲ್ಲಿ ಬೃಹತ್ ತೈಲ ಸ್ಥಾವರ ಸಂಕೀರ್ಣವನ್ನು ನಿರ್ಮಿಸುತ್ತಿರುವ ನಗರದ ಸಮುದ್ರಪ್ರದೇಶದಲ್ಲಿ ಸುಮಾರು 35 ಸಾವಿರ ಬ್ಯಾರೆಲ್ ಕಚ್ಚಾ ತೈಲವು ಸೋರಿಕೆಯಾಗಿರುವುದಾಗಿ ತಜ್ಞರು ತಿಳಿಸಿದ್ದಾರೆ.

ಸಾಗರದಲ್ಲಿರುವ ಕುವೈತಿ-ಸೌದಿ ಜಂಟಿ ತೈಲ ಉತ್ಖನನ ಪ್ರದೇಶದಲ್ಲಿ ಉಂಟಾಗಿರುವ ತೈಲ ಸೋರಿಕೆಯನ್ನು ನಿಲ್ಲಿಸಲು ತುರ್ತುಸ್ಥಿತಿ ಕಾರ್ಯಕರ್ತರು ಹರಸಾಹಸ ನಡೆಸುತ್ತಿದ್ದಾರೆಂದು ಕುವೈತ್ ಪೆಟ್ರೋಲಿಯಂ ನಿಗಮದ ವಕ್ತಾರ ತಲಾಲ್ ಅಲ್-ಖಾಲಿದ್ ತಿಳಿಸಿದ್ದಾರೆ.

  ಕುವೈತ್‌ನ ದಕ್ಷಿಣ ಕರಾವಳಿಯಲ್ಲಿರುವ ಸಮುದ್ರ ಪ್ರದೇಶದಲ್ಲಿ ಸೋರಿಕೆಯಾದ ತೈಲದ ಪ್ರಮಾಣದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಅಲ್-ಖಾಫ್ಜಿ ಪ್ರದೇಶದಲ್ಲಿರುವ 50 ಕಿ.ಮೀ. ವಿಸ್ತೀರ್ಣದ ಹಳೆಯ ಪೈಪ್‌ಲೈನ್‌ನಿಂದ ತೈಲ ಸೋರಿಕೆಯಾಗಿದೆಯೆಂದು ಕುವೈತ್‌ನ ಮಾಧ್ಯಮಗಳು ವರದಿ ಮಾಡಿವೆ.

    ಅಲ್‌ಝೌರ್ ನಗರದ ಸಾಗರಪ್ರದೇಶಕ್ಕೆ 35 ಸಾವಿರ ಕಚ್ಚಾ ತೈಲ ಸೋರಿಕೆಯಾಗಿರುವುದಾಗಿ ತಜ್ಞರು ಅಂದಾಜಿಸಿದ್ದಾರೆ. ಕುವೈತ್ ಆಡಳಿತವು ಅಲ್‌ಝೌರ್ ನಗರದಲ್ಲಿ ದಿನಂಪ್ರತಿ 6.15 ಬ್ಯಾರೆಲ್ ತೈಲವನ್ನು ಸಂಸ್ಕರಿಸುವ ತೈಲ ಸಂಸ್ಕರಣಾಗಾರ ಸೇರಿದಂತೆ 30 ಶತಕೋಟಿ ಡಾಲರ್ ವೆಚ್ಚದಲ್ಲಿ ತೈಲ ಸಂಕೀರ್ಣವೊಂದನ್ನು ನಿರ್ಮಿಸುತ್ತಿದೆ.

ಸೋರಿಕೆಯಾದ ತೈಲವು ಕುವೈತ್‌ನ ದಕ್ಷಿಣ ಭಾಗ ಗಲ್ಫ್ ಕರಾವಳಿಯಲ್ಲಿರುವ ದೇಶಗಳಾದ ಸೌದಿ ಆರೇಬಿಯ ಹಾಗೂ ಬಹರೈನ್‌ನ ಸಮುದ್ರ ಪ್ರದೇಶಗಳಿಗೆ ಇನ್ನೂ ತಲುಪಿಲ್ಲವೆಂದು ಮೂಲಗಳು ತಿಳಿಸಿವೆ.

ಕುವೈತ್ ವಿಶ್ವದ ಪ್ರಮುಖ ತೈಲ ಹಾಗೂ ನೈಸರ್ಗಿಕ ಅನಿಲ ಉತ್ಪಾದಕ ದೇಶಗಳಲ್ಲೊಂದಾಗಿದೆ. ತೈಲ ಹಾಗೂ ನೈಸರ್ಗಿಕ ಅನಿಲವು ಅದರ ರಫ್ತು ಆದಾಯದ ಶೇ.95ರಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News