ನಿತಾಖತ್ ಎಫೆಕ್ಟ್: 2ವರ್ಷಗಳಲ್ಲಿ ಸೌದಿಯ ಖಾಸಗಿ ಕ್ಷೇತ್ರದಲ್ಲಿ 6 ಲಕ್ಷ ಸ್ವದೇಶಿಗರಿಗೆ ಉದ್ಯೋಗ

Update: 2017-08-14 13:02 GMT

ರಿಯಾದ್, ಆ.14: ಸೌದಿ ಅರೇಬಿಯದಲ್ಲಿ ಖಾಸಗೀಕರಣ ಯೋಜನೆಯಾದ ನಿತಾಖತ್ ಜಾರಿಗೆ ಬಂದ ತರುವಾಯ ಕಳೆದ ಎರಡುವರ್ಷದಲ್ಲಿ ಸ್ವದೇಶಿ ಪ್ರಜೆಗಳಿಗೆ ಅತಿಹೆಚ್ಚು ಉದ್ಯೋಗ ಲಭಿಸಿದೆ ಎಂದು ಕಾರ್ಮಿಕ, ಸಾಮಾಜಿಕ ವಿಕಾಸ ಸಚಿವಾಲಯ ತಿಳಿಸಿದೆ. 2015,16ರಲ್ಲಿ ಆರು ಲಕ್ಷ ಉದ್ಯೋಗ ಖಾಸಗಿ ಕ್ಷೇತ್ರದಲ್ಲಿ ಸ್ವದೇಶಿಗಳಿಗೆ ಸಿಕ್ಕಿದೆ ಎಂದು ಸಚಿವಾಲಯ ಹೇಳಿದೆ.

  ಕಳೆದ ಎರಡು ವರ್ಷಗಳಲ್ಲಿ 6,01,770 ಸ್ವದೇಶಿ ಪ್ರಜೆಗಳು ಖಾಸಗಿ ಕ್ಷೇತ್ರದಲ್ಲಿ ಕೆಲಸ ಗಳಿಸಿದ್ದಾರೆ. ಇವರಲ್ಲಿ ಶೇ.7ರಷ್ಟು ಮಂದಿ ಮಾತ್ರ ಉದ್ಯೋಗವನ್ನು ತೊರೆದು ಪುನಃ ಉದ್ಯೋಗಕ್ಕೆ ಸೇರಿದವರಾಗಿದ್ದಾರೆ.

ಶೇ. 45ರಷ್ಟು ಮಂದಿಗೆ ಉದ್ಯಮ ಕ್ಷೇತ್ರದಲ್ಲಿ ಕೆಲಸ ಸಿಕ್ಕಿದೆ. ಉದ್ಯೋಗ ತೊರೆದಿದ್ದ 15,701 ಸ್ವದೇಶಿಗಳಿಗೆ ಕಳೆದವರ್ಷ ಖಾಸಗಿ ಕ್ಷೇತ್ರದಲ್ಲಿ ಕೆಲಸ ಸಿಕ್ಕಿದೆ.

 ಸ್ವದೇಶಿಗಳಲ್ಲಿ ನಿರುದ್ಯೋಗ ದರ ಕಡಿಮೆ ಮಾಡಲು ಕಾರ್ಮಿಕ ,ಸಾಮಾಜಿಕ ವಿಕಾಸ ಸಚಿವಾಲಯ ಅವಿರತ ಪ್ರಯತ್ನವನ್ನು ಮಾಡುತ್ತಿದೆ. 2030ರಲ್ಲಿ ನಿರುದ್ಯೋಗ ದರವನ್ನು ಶೇ.7ಕ್ಕೆ ಇಳಿಸುವ ಗುರಿಯನ್ನು ಅದು ಹೊಂದಿದೆ.

 ಈಗ ಶೇ.12.7ರಷ್ಟು ಸ್ವದೇಶಿಗಳು ನಿರುದ್ಯೋಗಿಗಳಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಸ್ವದೇಶಿಗಳಿಗೆ ಹೆಚ್ಚು ಉದ್ಯೋಗವಕಾಶವನ್ನು ಲಭ್ಯಗೊಳಿಸಲಿಕ್ಕಾಗಿ 2011ರಲ್ಲಿ ಸ್ವದೇಶೀಕರಣವನ್ನು ಆರಂಭಿಸಲಾಗಿತ್ತು. ಸೌದಿಯಲ್ಲಿ ಖಾಸಗಿ ಕ್ಷೇತ್ರದಲ್ಲಿ 1.1 ಕೋಟಿ ವಿದೇಶಿಗಳು ಕೆಲಸ ಮಾಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಹೆಚ್ಚು ಸ್ವದೇಶಿಗಳನ್ನು ನೇಮಕಗೊಳಿಸುವ ನಿತಾಖತ್ ಮುಂದಿನ ತಿಂಗಳು ಮೂರನೆ ತಾರೀಕಿನಿಂದ ಜಾರಿಗೊಳ್ಳಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News