ಅರಾರ್ ಗಡಿ ಕ್ರಾಸಿಂಗ್ ವ್ಯಾಪಾರಕ್ಕೆ ಮುಕ್ತಗೊಳಿಸಲು ಸೌದಿ- ಇರಾಕ್ ಯೋಜನೆ

Update: 2017-08-15 16:20 GMT

ರಿಯಾದ್, ಆ.15: 1990ರ ಬಳಿಕ ಪ್ರಪ್ರಥಮ ಬಾರಿಗೆ ಅರಾರ್ ಗಡಿ ದಾಟು (ಕ್ರಾಸಿಂಗ್) ಸ್ಥಳವನ್ನು ವ್ಯಾಪಾರದ ಉದ್ದೇಶಕ್ಕಾಗಿ ಮುಕ್ತಗೊಳಿಸಲು ಸೌದಿ ಅರೆಬಿಯ ಮತ್ತು ಇರಾಕ್ ದೇಶಗಳು ಯೋಚಿಸುತ್ತಿವೆ.

    ಇರಾಕ್‌ನ ಅಂದಿನ ಅಧ್ಯಕ್ಷ ಸದ್ದಾಂ ಹುಸೇನ್ ಕುವೈಟ್ ಮೇಲೆ ಆಕ್ರಮಣ ನಡೆಸಿದ ಬಳಿಕ ಸೌದಿ ಮತ್ತು ಇರಾಕ್ ರಾಷ್ಟ್ರಗಳ ನಡುವಿನ ಸಂಬಂಧ ಕಡಿತಗೊಂಡಿತ್ತು. ಗಡಿ ದಾಟು ಮುಕ್ತಗೊಳಿಸುವ ಕುರಿತು ಪರಿಶೀಲನೆ ನಡೆಸುವ ಸಲುವಾಗಿ ಸೌದಿ ಮತ್ತು ಇರಾಕ್ ಅಧಿಕಾರಿಗಳು ಸೋಮವಾರ ಅರಾರ್ ಗಡಿ ಕ್ರಾಸಿಂಗ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಇರಾಕ್‌ನ ಧಾರ್ಮಿಕ ಯಾತ್ರಿಕರೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಿದರು. ಕಳೆದ 27 ವರ್ಷಗಳಿಂದ ಮುಚ್ಚಿರುವ ಈ ‘ಗಡಿದಾಟು’ ಪ್ರದೇಶವನ್ನು ಪವಿತ್ರ ಮೆಕ್ಕಾ ಯಾತ್ರೆಯ ಸಂದರ್ಭದಲ್ಲಿ ಮಾತ್ರ ಮುಕ್ತಗೊಳಿಸಲಾಗುತ್ತಿದೆ.

    ಅರಾರ್ ಕಡೆ ಸಾಗುವ ರಸ್ತೆಯಲ್ಲಿ ಭದ್ರತಾ ಕಾರ್ಯಕ್ಕಾಗಿ ಇರಾಕಿ ಸರಕಾರ ಭದ್ರತಾ ಪಡೆಯನ್ನು ನಿಯೋಜಿಸಿದೆ. ಇದೀಗ ಈ ಗಡಿದಾಟು ಪ್ರದೇಶವನ್ನು ವ್ಯಾಪಾರದ ಉದ್ದೇಶದಿಂದ ಮುಕ್ತಗೊಳಿಸುವ ಯೋಚನೆ , ಸಂಬಂಧ ಸುಧಾರಣೆಯತ್ತ ಒಂದು ‘ಗಮನಾರ್ಹ ನಡೆ’ ಎಂದು ಇರಾಕ್‌ನ ನೈಋತ್ಯದಲ್ಲಿರುವ ಅನ್ಬಾರ್ ಪ್ರಾಂತ್ಯದ ಗವರ್ನರ್ ಸೊಹೈಬ್ ಅಲ್ ರಾವಿ ಹೇಳಿದ್ದಾರೆ. ಇರಾಕ್ ಮತ್ತು ಸೌದಿ ಅರೆಬಿಯ ಮಧ್ಯೆ ಭವಿಷ್ಯದ ಸಹಕಾರ ಸಂಬಂಧದ ನಿಟ್ಟಿನಲ್ಲಿ ಇದೊಂದು ಉತ್ತಮ ಆರಂಭ ಎಂದವರು ಹೇಳಿದ್ದಾರೆ.

 ಇರಾಕ್‌ನೊಂದಿಗೆ ಜಂಟಿ ವ್ಯಾಪಾರ ಸಮಿತಿ ಆರಂಭಿಸಲು ಸೌದಿ ಸಚಿವ ಸಂಪುಟ ಸೋಮವಾರ ನಿರ್ಧರಿಸಿದ ಬಳಿಕ ಈ ಘೋಷಣೆ ಹೊರಬಿದ್ದಿದೆ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಇರಾನ್‌ನ ಪ್ರಭಾವವನ್ನು ತಡೆಗಟ್ಟುವ ಉದ್ದೇಶದಿಂದ ಸೌದಿ ಅರೆಬಿಯ ಮತ್ತು ಯುಎಇ ಇದೀಗ ತಮ್ಮ ನೆರೆಯ ದೇಶಗಳೊಂದಿಗೆ ಸಂಬಂಧ ವೃದ್ಧಿಗೆ ಮುಂದಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News