ಶಾರ್ಜಾ: ಚಲಿಸುತ್ತಿದ್ದ ಕಾರಿನಿಂದ ಬಿದ್ದು ಕೇರಳದ ರಾಜಕಾರಣಿ ಮೃತ್ಯು
ಹೊಸದಿಲ್ಲಿ, ಆ.17: ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಕೇರಳದ ರಾಜಕಾರಣಿಯೊಬ್ಬರು ಮೃತಪಟ್ಟ ಘಟನೆ ಶಾರ್ಜಾದಲ್ಲಿ ಸಂಭವಿಸಿದೆ. ಕಾರಿನಿಂದ ಬಿದ್ದ 40 ವರ್ಷದ ಸುನೀತಾ ಪ್ರಶಾಂತ್ ಎಂಬವರ ತಲೆ ನೆಲಕ್ಕೆ ಬಡಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.
ಕಾಸರಗೋಡು ಜಿಲ್ಲೆಯ ಅಡುಕ್ಕತ್ ವಯಲ್ ಬೀಚ್ ಏರಿಯಾದ ನಿವಾಸಿಯಾಗಿರುವ ಸುನೀತಾ 5 ವರ್ಷಗಳಿಂದ ಶಾರ್ಜಾದ ಸಲೂನೊಂದರಲ್ಲಿ ಬ್ಯುಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಕಾಸರಗೋಡು ಪುರಸಭೆಯಲ್ಲಿ ಬಿಜೆಪಿಯ ಕೌನ್ಸಿಲರ್ ಆಗಿದ್ದರು. 2011ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉದುಮ ಕ್ಷೇತ್ರದಿಂದ ಅವರು ಅಭ್ಯರ್ಥಿಯಾಗಿದ್ದರು ಎಂದು ಇಂಡಿಯನ್ ಪೀಪಲ್ಸ್ ಫೋರಂನ ಅಧ್ಯಕ್ಷ ಗಣೇಶ್ ಅರಮಂಗಣಂ ಮಾಹಿತಿ ನೀಡಿದ್ದಾರೆ.
ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದ ಇತರ ಸಹೋದ್ಯೋಗಿಗಳೊಂದಿಗೆ ಫ್ಲ್ಯಾಟ್ ಒಂದರಲ್ಲಿ ನೆಲೆಸಿದ್ದರು. ಸಲೂನ್ ಮಾಲಕ ಸುನೀತಾ ಸೇರಿದಂತೆ ಇತರರನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಕಾರಿನ ಬಾಗಿಲು ತೆರೆದಿದ್ದು, ಸುನೀತಾ ಹೊರಕ್ಕೆಸೆಯಲ್ಪಟ್ಟಿದ್ದಾರೆ. ಸುನೀತಾರ ತಲೆ ನೆಲಕ್ಕೆ ಬಡಿದಿದ್ದು, ಪರಿಣಾಮ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ