ಕತರ್ ಹಜ್ ಯಾತ್ರಿಗಳಿಗಾಗಿ ಗಡಿ ತೆರೆದ ಸೌದಿ ಅರೇಬಿಯ

Update: 2017-08-17 16:05 GMT

ರಿಯಾದ್, ಆ. 17: ಕತರ್‌ನ ಹಜ್ ಯಾತ್ರಿಗಳಿಗೆ ಅನುಕೂಲವಾಗುವಂತೆ ಆ ದೇಶದೊಂದಿಗಿನ ಭೂಗಡಿಯನ್ನು ತೆರೆಯುವಂತೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಆದೇಶ ನೀಡಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುದಾಗಿ ಆರೋಪಿಸಿ ಸೌದಿ ಅರೇಬಿಯ, ಬಹರೈನ್, ಯುಎಇ ಮತ್ತು ಈಜಿಪ್ಟ್‌ಗಳು ಜೂನ್ ತಿಂಗಳಲ್ಲಿ ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದನ್ನು ಮತ್ತು ಅದರೊಂದಿಗಿನ ಗಡಿಯನ್ನು ಮುಚ್ಚಿರುವುದನ್ನು ಸ್ಮರಿಸಬಹುದಾಗಿದೆ.

ಸೌದಿಯ ಪಟ್ಟದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಕತರ್‌ನ ರಾಯಭಾರಿಯೊಬ್ಬರೊಂದಿಗೆ ಮಾತುಕತೆ ನಡೆಸಿದ ಬಳಿಕ, ಕತರ್ ಯಾತ್ರಿಕರಿಗಾಗಿ ಸಾಲ್ವ ಗಡಿಯನ್ನು ತೆರೆಯುವ ಪ್ರಕಟಣೆ ಹೊರಬಿದ್ದಿದೆ.

ಬಿಕ್ಕಟ್ಟು ಆರಂಭಗೊಂಡ ಬಳಿಕ, ಉಭಯ ದೇಶಗಳ ನಡುವೆ ಅತ್ಯುನ್ನತ ಮಟ್ಟದಲ್ಲಿ ನಡೆದ ಮೊದಲ ಮಾತುಕತೆ ಇದಾಗಿದೆ.

ಹಜ್ ನಿರ್ವಹಿಸುವ ಕತರ್ ಯಾತ್ರಿಕರು ಸಾಲ್ವ ಗಡಿ ದಾಟುವಿನ ಮೂಲಕ ಸೌದಿ ಅರೇಬಿಯ ಪ್ರವೇಶಿಸಲು ಹಾಗೂ ಇಲೆಕ್ಟ್ರಾನಿಕ್ ಅನುಮೋದನೆಗಳಿಲ್ಲದೆ ಹಜ್ ನಿರ್ವಹಿಸಲು ಬಯಸುವ ಕತರ್ ರಾಷ್ಟ್ರೀಯರನ್ನು ಒಳಬಿಡಲು ದೊರೆ ಅನುಮೋದನೆ ನೀಡಿದ್ದಾರೆ ಎಂದು ಹೇಳಿಕೆಯೊಂದು ತಿಳಿಸಿದೆ.

ಎಲ್ಲ ಕತರ್ ಯಾತ್ರಿಗಳನ್ನು ತನ್ನ ವೆಚ್ಚದಲ್ಲಿ ಸೌದಿಗೆ ಕರೆತರಲು ದೋಹಾ ವಿಮಾನ ನಿಲ್ದಾಣಕ್ಕೆ ಸೌದಿ ಏರ್‌ಲೈನ್‌ಗಳಿಗೆ ಸೇರಿದ ಖಾಸಗಿ ವಿಮಾನಗಳನ್ನು ಕಳುಹಿಸುವಂತೆಯೂ ದೊರೆ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News