16 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಸುಡಾನ್‌ ನ ಹನಿ

Update: 2017-08-19 13:01 GMT

ಶಾರ್ಜ,ಆ. 19: ಆ ಅಮ್ಮ ಮಗನ ಹದಿನಾರುವರ್ಷದ ಕಾಯುವಿಕೆ ಮತ್ತು ಪ್ರಾರ್ಥನೆ ಕೊನೆಗೂ ಸಫಲವಾಗಿದೆ. ಸುಡಾನ್‌ನಿಂದ ಬಂದ ಮಗ ಹನಿ, ಕೇರಳದಿಂದ ಬಂದ ಅಮ್ಮ ನೂರ್‌ಜಹಾನ್ ಪರಸ್ಪರ ಭೇಟಿಯಾದರು. ಈ ಘಟನೆಗೆ ವಿಮಾನ ನಿಲ್ದಾಣದ ಅಧಿಕಾರಿಗಳು, ಪ್ರಯಾಣಿಕರು, ಹನಿಯ ಸಹೋದರಿ ಸಮೀರಾ ಸಾಕ್ಷಿಯಾದರು.

ಸುಡಾನ್‌ನಲ್ಲಿದ್ದು ಬಹಳ ಕಷ್ಟಪಟ್ಟು ದುಬೈಯಲ್ಲಿದ್ದ ಸಹೋದರಿ ಸಮೀರಾಳ ಬಳಿಗೆ ಬಂದ ಹನಿ, ತನಗೆ ಅಮ್ಮನನ್ನು ನೋಡಬೇಕೆಂದು ಆಸೆ ವ್ಯಕ್ತಪಡಿಸಿದ್ದ. ನಂತರ ಹನಿಯ ಕಥೆಯನ್ನು ಗಲ್ಫ್‌ಮಾಧ್ಯಮಂ ಪ್ರಕಟಿಸಿತ್ತು. ಈ ಸುದ್ದಿಯನ್ನು ಗಮನಿಸಿದ ಪಾಕಿಸ್ತಾನದ ತಲ್ಹಾ ಶಾ ನೂರ್‌ಜಹಾನ್‌ರಿಗೆ ಶಾರ್ಜಾಕ್ಕೆ ಬರುವ ವಿಮಾನದ ಟಿಕೆಟ್ ನೀಡಿದರು. ಶಾರ್ಜಾದ ತನ್ನ ಸಂಸ್ಥೆಯಲ್ಲಿ ಹನಿಗೆ ಒಂದು ಕೆಲಸ ನೀಡುವುದಾಗಿ ತಲ್ಹಾ ಹೇಳಿದ್ದರು. ಆದರೆ, ಹನಿಗೆ ಬೇರೊಂದು ಪ್ರಮುಖ ಟೈಪಿಂಗ್ ಸಂಸ್ಥೆಯಲ್ಲಿ ಕೆಲಸ ದೊರಕಿತ್ತು.

  ಸುಡಾನ್‌ನಿಂದ ಕಲ್ಲಿಕೋಟೆಯ ಪೆರಿಂದಲ್‌ಮಣ್ಣಕ್ಕೆ ಬಂದು ಮದುವೆಯಾದ ಹನಿಯ ತಂದೆ ಹದಿನಾರು ವರ್ಷಗಳ ಹಿಂದೆ ಹನಿಯನ್ನು ಕರೆದುಕೊಂಡು ಹೋಗಿದ್ದರಿಂದ ಹನಿ ಅಮ್ಮಮತ್ತು ಸಹೋದರಿಯಿಂದ ದೂರವಾಗಿದ್ದ. ತಂದೆ ಕರೆದು ಕೊಂಡು ಹೋಗುವಾಗ ಹನಿ ನಡಕ್ಕಾವ್ ಎಂಬಲ್ಲಿನ ನರ್ಸರಿ ಸ್ಕೂಲ್‌ನಲ್ಲಿ ಕಲಿಯುತ್ತಿದ್ದ. ನಂತರ ಊರಿನೊಂದಿಗೆ ಯಾವ ಸಂಬಂಧವೂ ಹನಿಗಿರಲಿಲ್ಲ. ಆದರೆ, ಕಳೆದ ವರ್ಷ ಅಮ್ಮನ ಫೋಟೊ, ಮದುವೆ ಸರ್ಟಿಫಿಕೆಟ್ ಮತ್ತುಇತರ ವಿವರಗಳು ಹನಿಗೆ ಸಿಕ್ಕಿತ್ತು. ಸುಡಾನ್‌ಗೆ ಭೇಟಿ ನೀಡಿದ ಮಣ್ಣಾರ್‌ಕ್ಕಾಡ್ ಎಂಬಲ್ಲಿನ ಫಾರೂಕ್ ಗೆ ಹನಿ ಈ ವಿಷಯವನ್ನೆಲ್ಲ ತಿಳಿಸಿದ್ದಾನೆ. ಫಾರೂಕ್ ನೀಡಿದ ವಿವರಗಳನ್ನು ಅಬುಧಾಬಿಯಲ್ಲಿ ಕೆಲಸದಲ್ಲಿದ್ದ ಕೇರಳದ ರಹೀಂ ಪೊಯಿಲ್ ಎನ್ನುವವರು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದರು.

ಸುಡಾನ್‌ನಲ್ಲಿರುವ ಯುವಕ ಕೇರಳದಲ್ಲಿರುವ ಅಮ್ಮನನ್ನು ಹುಡುಕುತ್ತಿದ್ದಾನೆ ಎನ್ನುವ ವಿವರ ಸಿಕ್ಕಿದ ಸಂಬಂಧಿಕರಲ್ಲೊಬ್ಬರಾದ ಶಿಹಾಬ್ ಎನ್ನುವವರು ಹನಿಯನ್ನು ಸಂಪರ್ಕಿಸಿದರು. ನಂತರ ಅವರು ಹಲವು ವರ್ಷಗಳಿಂದ ಮಗನಿಗಾಗಿ ಕಾದಿದ್ದ ಅಮ್ಮನಿಗೆ ಮಗ ಸಿಕ್ಕಿದ್ದಾನೆ ಎನ್ನುವ ಸುದ್ದಿ ಮುಟ್ಟಿಸಿದರು. ಜೀವನದ ಕಷ್ಟಕ್ಕೆ ಸ್ವಲ್ಪವಾದರೂ ಸಹಾಯವಾಗಲಿ ಎಂದು ದುಬೈಯ ಒಂದು ಅಂಗಡಿಯಲ್ಲಿ ಕೆಲಸಮಾಡುತ್ತಿರುವ ಸಹೋದರಿ ಮತ್ತುಕೆಲವು ಸಂಬಂಧಿಕರು ತಂದೆಗೆ ಗೊತ್ತಾಗದಂತೆ ಹನಿಯನ್ನು ಮೂರು ತಿಂಗಳ ವಿಸಿಟಿಂಗ್ ವೀಸಾದಲ್ಲಿ ಯುಎಇಗೆ ಕರೆಯಿಸಿಕೊಂಡರು.

ಸಹೋದರಿ ತನ್ನೆಲ್ಲ ಚಿನ್ನವನ್ನು ಮಾರಿ ತನ್ನ ಸಹೋದರನನ್ನು ಕರೆಸಿಕೊಳ್ಳಲು ಹಣ ಹೊಂದಿಸಿದರು. ಶುಕ್ರವಾರದ ರಜಾದಿವಸ ತಮ್ಮ ಮತ್ತು ಅಕ್ಕ ಹದಿನಾರು ವರ್ಷಗಳ ಅಗಲಿಕೆಯ ನಂತರ ಪರಸ್ಪರ ಭೇಟಿಯಾದರು. ಅಮ್ಮನನ್ನು ಕೇರಳಕ್ಕೆ ಹೋಗಿ ಭೇಟಿಯಾಗಲು ಹನಿ ಬಯಸಿದ್ದ. ಆದರೆ, ಸಂದರ್ಶಕ ವೀಸಾದ ಸಮಯ ಮೀರುವುದರಿಂದ ಒಂದು ಕೆಲಸವನ್ನು ಹುಡುಕಿದ ಬಳಿಕ ಅಮ್ಮನನ್ನು ಭೇಟಿಯಾಗಬೇಕೆಂದು ಗೆಳೆಯರು ಸಲಹೆ ನೀಡಿದ್ದರು. ಎಂದೂ ಕಾಣಲು ಸಾಧ್ಯವಿಲ್ಲ ಎಂದು ಭಾವಿಸಿದ್ದ ಸಹೋದನನ್ನು ಕಣ್ಣೆದುರು ತಂದು ನಿಲ್ಲಿಸಿದ ದೇವನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎನ್ನುತ್ತಾಳೆ ಸಹೋದರಿ ಶಮೀರಾ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News