ಹಜ್ ವೇಳೆ ತನ್ನ ಪ್ರಜೆಗಳ ಸುರಕ್ಷತೆ ಬಗ್ಗೆ ಕತರ್ ಕಳವಳ

Update: 2017-08-19 14:19 GMT

ಓಸ್ಲೊ (ನಾರ್ವೆ), ಆ. 19: ಹಜ್ ಯಾತ್ರೆಗಾಗಿ ಸೌದಿ ಅರೇಬಿಯಕ್ಕೆ ತೆರಳಿರುವ ತನ್ನ ನಾಗರಿಕರ ಸುರಕ್ಷತೆ ಬಗ್ಗೆ ಕತರ್ ಕಳವಳ ವ್ಯಕ್ತಪಡಿಸಿದೆ.

ಹಜ್ ಯಾತ್ರೆ ಕೈಗೊಳ್ಳುವ ಕತರ್ ಪ್ರಜೆಗಳ ಅನುಕೂಲಕ್ಕಾಗಿ ಸೌದಿ ಅರೇಬಿಯವು ಇತ್ತೀಚೆಗೆ ಗಡಿಯನ್ನು ತೆರೆದಿರುವುದನ್ನು ಸ್ಮರಿಸಬಹುದಾಗಿದೆ.

ಹಜ್ ಅವಧಿಯಲ್ಲಿ ಕತರ್ ಪ್ರಜೆಗಳ ಭದ್ರತೆಗೆ ಸಂಬಂಧಿಸಿ ಕತರ್‌ನ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಕೇಳಿದ ಪ್ರಶ್ನೆಗಳಿಗೆ ಸೌದಿ ಅಧಿಕಾರಿಗಳು ಇನ್ನೂ ಉತ್ತರಿಸಿಲ್ಲ ಎಂದು ನಾರ್ವೆ ಪ್ರವಾಸದಲ್ಲಿರುವ ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್-ತಾನಿ ಹೇಳಿದರು.

‘‘ಎರಡು ದೇಶಗಳ ನಡುವಿನ ಉದ್ವಿಗ್ನತೆಯ ಮಟ್ಟ, ಕತರ್ ಜನತೆಯ ವಿರುದ್ಧ ಸೌದಿ ಮಾಧ್ಯಮಗಳು ಹರಡುತ್ತಿರುವ ದ್ವೇಷದ ಭಾಷೆ ಮತ್ತು ಧ್ವನಿಯು ನಮ್ಮಲ್ಲಿ ತೀವ್ರ ಕಳವಳ ಹುಟ್ಟಿಸಿದೆ’’ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ಹೇಳಿದರು.

‘‘ಸೌದಿ ಅಧಿಕಾರಿಗಳ ಜವಾಬ್ದಾರಿಯಲ್ಲಿ ಕತರ್ ಪ್ರಜೆಗಳು ಆ ದೇಶಕ್ಕೆ ಗಡಿ ದಾಟಿ ಹೋಗುತ್ತಿದ್ದಾರೆ’’ ಎಂದು ಅವರು ತಿಳಿಸಿದರು.

ಗಡಿಯನ್ನು ಮರುತೆರೆದ ಬಳಿಕ 100ಕ್ಕೂ ಅಧಿಕ ಮಂದಿ ಗಡಿ ದಾಟಿ ಸೌದಿ ಅರೇಬಿಯಕ್ಕೆ ಹೋಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News