ಕತರ್‌ನಿಂದ ಹಜ್ ಯಾತ್ರಿಗಳನ್ನು ಕರೆತರಲು ವಿಮಾನಗಳು ಸಿದ್ಧ

Update: 2017-08-21 15:10 GMT

ದುಬೈ, ಆ. 21: ದೋಹಾ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ನಡೆಸಲು ತನಗೆ ಅನುಮತಿ ಲಭಿಸಿಲ್ಲ, ಹಾಗಾಗಿ ಕತರ್‌ನಿಂದ ಹಜ್ ಯಾತ್ರಿಕರನ್ನು ಸೌದಿ ಅರೇಬಿಯಕ್ಕೆ ಕರೆ ತರಲು ವಿಮಾನಗಳನ್ನು ಕಳುಹಿಸಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಸೌದಿ ಅರೇಬಿಯದ ಸರಕಾರಿ ಒಡೆತನದ ವಿಮಾನಯಾನ ಕಂಪೆನಿ ರವಿವಾರ ಹೇಳಿದೆ.

ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಕತರ್ ವಿರುದ್ಧ ಜೂನ್ ತಿಂಗಳಲ್ಲಿ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಅಂದಿನಿಂದ ಈ ದೇಶಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ.

ವಾರ್ಷಿಕ ಹಜ್ ಯಾತ್ರೆಗೆ ಸೌದಿ ಅರೇಬಿಯಕ್ಕೆ ಬರುವ ಕತರ್ ಪ್ರಜೆಗಳ ಪ್ರಯಾಣಕ್ಕೆ ಏರ್ಪಾಡು ಮಾಡುವುದಾಗಿ ಸೌದಿ ಅರೇಬಿಯ ಕಳೆದ ವಾರ ಹೇಳಿತ್ತು.

ಕತರ್‌ನಿಂದ ಭೂಮಾರ್ಗವಾಗಿ ಬರುವ ಯಾತ್ರಿಕರಿಗಾಗಿ ಸೌದಿ ಅರೇಬಿಯ ಕಳೆದ ವಾರ ಕತರ್‌ನೊಂದಿಗಿನ ತನ್ನ ಗಡಿಯನ್ನು ತೆರೆದಿತ್ತು. ಅದೇ ವೇಳೆ, ಇತರ ಯಾತ್ರಿಗಳನ್ನು ಜಿದ್ದಾಗೆ ಕರೆತರಲು ಸೌದಿ ಅರೇಬಿಯ ಏರ್‌ಲೈನ್ಸ್‌ನ ವಿಮಾನಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ದೋಹಾಕ್ಕೆ ಕಳುಹಿಸುವಂತೆಯೂ ದೊರೆ ಸಲ್ಮಾನ್ ಆದೇಶ ನೀಡಿದ್ದಾರೆ ಎಂದು ಸೌದಿ ಅರೇಬಿಯ ಹೇಳಿತ್ತು.

ಆದಾಗ್ಯೂ, ದೋಹಾ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ಇನ್ನೂ ಸಿಗದ ಕಾರಣ ದೋಹಾಕ್ಕೆ ಹೋಗಬೇಕಾಗಿದ್ದ ಮೊದಲ ವಿಮಾನ ಜಿದ್ದಾದಲ್ಲೇ ಬಾಕಿಯಾಗಿದೆ ಎರಂದು ವಿಮಾನಯಾನ ಕಂಪೆನಿಯ ಮಹಾನಿರ್ದೇಶಕ ಸಲೇಹ್ ಅಲ್-ಜಸೀರ್ ಹೇಳಿದ್ದಾರೆ ಎಂದು ಸೌದಿ ಸರಕಾರಿ ಸುದ್ದಿ ಸಂಸ್ಥೆ ಎಸ್‌ಪಿಎ ತಿಳಿಸಿದೆ.

ಭೂಸ್ಪರ್ಶ ಅನುಮತಿಗಾಗಿ ಹಲವಾರು ದಿನಗಳ ಹಿಂದೆಯೇ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಆರೋಪ ನಿರಾಕರಿಸಿದ ಕತರ್

ಆದರೆ, ಸೌದಿ ಅರೇಬಿಯ ಏರ್‌ಲೈನ್ಸ್ ವಿಮಾನಗಳಿಗೆ ದೋಹಾ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನೀಡಲಾಗಿಲ್ಲ ಎಂಬ ವಿಮಾನಯಾನ ಸಂಸ್ಥೆಯ ಹೇಳಿಕೆಯನ್ನು ಕತರ್‌ನ ನಾಗರಿಕ ವಾಯುಯಾನ ಪ್ರಾಧಿಕಾರ (ಸಿಎಎ)ದ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ.

‘‘ಕತರ್ ಹಜ್ ಯಾತ್ರಿಕರನ್ನು ಸಾಗಿಸಲು ಅನುಮತಿ ಕೋರಿ ಸೌದಿ ಏರ್‌ಲೈನ್ಸ್ ಸಲ್ಲಿಸಿರುವ ಅರ್ಜಿ ಸಿಎಎಗೆ ಸಿಕ್ಕಿದೆ. ಈ ವಿಷಯದಲ್ಲಿ ಕತರ್ ಹಜ್ ನಿಯೋಗದ ಮೂಲಕ ನೀವು ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಬೇಕು ಎಂಬುದನ್ನು ವಿವರಿಸಿ ಅವರಿಗೆ ಉತ್ತರಿಸಲಾಗಿದೆ. ಹಿಂದಿನಿಂದಲೂ ಅನುಸರಿಸಲಾಗುತ್ತಿರುವ ವಿಧಿವಿಧಾನಗಳಂತೆ ಅವರಿಗೆ ಈ ಮಾಹಿತಿ ನೀಡಲಾಗಿದೆ. ನಂತರವಷ್ಟೇ ಸಿಎಎ ಈ ವಿಷಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ’’ ಎಂದು ಆ ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News