ರಿಯಾದ್ ನಲ್ಲಿ ಶಿವಮೊಗ್ಗ ಮೂಲದ ವ್ಯಕ್ತಿ ನಿಧನ: ಕೆಸಿಎಫ್ ನೇತೃತ್ವದಲ್ಲಿ ಅಂತ್ಯಕ್ರಿಯೆ

Update: 2017-08-21 17:26 GMT

ರಿಯಾದ್, ಆ. 21: ಕಳೆದ ಎರಡು ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ದರಯ್ಯಾ ಪ್ರಾಂತ್ಯದ ಸೌದಿ ನಿವಾಸಿಯೊಬ್ಬರ ಮನೆಯಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಕನ್ನಡಿಗರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದು, ಕೆಸಿಎಫ್ ನ ನೇತೃತ್ವದಲ್ಲಿ ಸೋಮವಾರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಮೃತರನ್ನು ಶಿವಮೊಗ್ಗದ ಖಾಝಿ ಮೊಹಲ್ಲಾದ ಶೇಕ್  ಮುಹಮ್ಮದ್  ಸಲೀಂ(60) ಎಂದು ಗುರುತಿಸಲಾಗಿದ್ದು , ಮನೆ ಚಾಲಕನಾಗಿ ಕೆಲಸ ನಿರ್ವಹಿಸುತ್ತಿ ದ್ದರು. ಆ.18ರಂದು ಎದೆ ನೋವು ಕಾಣಿಸಿಕೊಂಡು ವಾಸ ಸ್ಥಳದಲ್ಲೇ ಮೃತರಾಗಿದ್ದರು.  ಮೃತ ವ್ಯಕ್ತಿಯ  ಬಗ್ಗೆ ಮಾಹಿತಿ ಪಡೆದುಕೊಂಡ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಘಟಕದ ಸಾಂತ್ವನ ವಿಭಾಗವು ಕೂಡಲೇ ಮೃತರ ಮರಣೋತ್ತರ ಕ್ರಿಯೆಗೆ ಅಗತ್ಯವಾದ ದಾಖಲೆ ಪತ್ರಗಳನ್ನು, ವಿವಿಧ ಇಲಾಖೆಗಳಿಂದ ಸಂಗ್ರಹಿಸಿ ಹಾಗೂ ಊರಿನ ಕುಟುಂಬಸ್ಥರಿಂದ ಅನುಮತಿ ಪತ್ರ ಪಡೆದು ರಿಯಾದ್ ನಲ್ಲಿ ಅಂತ್ಯ ಕ್ರಿಯೆ ನಡೆಸುವಲ್ಲಿ ನೆರವಾಯಿತು.

ಸೌದಿ ಆರೋಗ್ಯ ಇಲಾಖೆ, ವಲಸಿಗರ ಪ್ರಾಧಿಕಾರ, ಸ್ಥಳೀಯ ಪೊಲೀಸ್ ಠಾಣೆ, ಭಾರತೀಯ ರಾಯಭಾರಿ ಕಚೇರಿ, ಊರಿನ ಕುಟುಂಬಿಕರು ಸೇರಿದಂತೆ ಅಂತ್ಯ ಸಂಸ್ಕಾರ ನಡೆಸಲು ಬೇಕಾದ ಅಗತ್ಯ ದಾಖಲೆ ಪತ್ರಗಳನ್ನು  ಕೆಸಿಎಫ್ ರಿಯಾದ್ ಝೋನಲ್ ಮುಖಂಡರಾದ ಹಂಝ ಮೈಂದಾಳ , ಹಸನ್ ಸಾಗರ್ , ಖಲಂದರ್ ಪಾಣೆಮಂಗಳೂರು ಹಾಗೂ ಮಜೀದ್ ನೇತೃತ್ವದಲ್ಲಿ ಸಂಗ್ರಹಿಸಲಾಯಿತು.

ಪತ್ನಿ ಹಾಗೂ ಇಬ್ಬರು ಸಣ್ಣ ಹೆಣ್ಮಕ್ಕಳನ್ನು ಅಗಲಿದ ಮೃತರ ಕುಟುಂಬವು ಇದೀಗ ಸಂಪೂರ್ಣ ಅನಾಥವಾಗಿದ್ದು ದುಃಖತಪ್ತ  ಕುಟುಂಬಕ್ಕೆ ನೆರವಾಗುವಂತೆ  ಕೆಸಿಎಫ್ ಕಾರ್ಯಕರ್ತರು ಮಾಡಿಕೊಂಡ ಮನವಿಗೆ ಮೃತರ 'ಕಫೀಲ್'   ಸ್ಪಂದಿಸಿದ್ದು ಸುಮಾರು ಎಂಟು ಸಾವಿರ ರಿಯಾಲ್ ( 1,35,000 ರೂ )ನ್ನು  ಅವರ ಪತ್ನಿಯ ಖಾತೆಗೆ ಕಳುಹಿಸಿಕೊಟ್ಟಿದ್ದಾರೆ.

ರಿಯಾದ್ ಸಮೀಪದ  ಮಸ್ಜಿದ್ ಅಲ್ ರಾಜಿಹ್ ನಲ್ಲಿ ನಡೆದ ಜನಾಝ ನಮಾಝ್ ಹಾಗೂ ನಸೀಂ ಸಾರ್ವಜನಿಕ ದಫನ ಭೂಮಿಯಲ್ಲಿ ನಡೆದ ದಫನ ಕಾರ್ಯದಲ್ಲಿ ಕೆಸಿಎಫ್ ಕಾರ್ಯಕರ್ತರಾದ ನವಾಝ್ ಸಖಾಫಿ, ಹಂಝ ಮೈಂದಾಳ, ಉಸ್ಮಾನ್ ಪರಪ್ಪು ಸೇರಿದಂತೆ ಮೃತರ ಬಂಧುಗಳು, ಸ್ನೇಹಿತರು ಹಾಗೂ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. ದಫನದ ತರುವಾಯ ನಡೆದ ಪ್ರಾರ್ಥನೆಗೆ ಕೆಸಿಎಫ್ ರಿಯಾದ್ ಝೋನಲ್ ಶಿಕ್ಷಣ ವಿಭಾಗದ ಅಧ್ಯಕ್ಷ  ನವಾಝ್ ಸಖಾಫಿ ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News