ಹಜ್‌ಗೆ ಕ್ಷಣ ಗಣನೆ; ಸಿದ್ಧತೆಗಳು ಸಂಪೂರ್ಣ: ಅಧಿಕಾರಿಗಳಿಂದ ಘೋಷಣೆ

Update: 2017-08-30 14:25 GMT

ಮಿನಾ (ಸೌದಿ ಅರೇಬಿಯ), ಆ. 30: ಇಪ್ಪತ್ತು ಲಕ್ಷಕ್ಕೂ ಅಧಿಕ ಹಜ್ ಯಾತ್ರಿಗಳಿಗೆ ಸೇವೆ ಸಲ್ಲಿಸಲು ವಿವಿಧ ಸಂಸ್ಥೆಗಳು ಸಿದ್ಧವಾಗಿವೆ ಎಂದು ಸೌದಿ ಅರೇಬಿಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

  ‘ತರ್ವಿಯಾ ದಿನ’ದ ಸಿದ್ಧತೆಗಾಗಿ ಯಾತ್ರಿಕರು ಆಗಮಿಸಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಮನ್ಸೂರ್ ಅಲ್-ತುರ್ಕಿ ಹೇಳಿದರು. ‘ತರ್ವಿಯಾ ದಿನ ಆಚರಣೆ ಬುಧವಾರ ನಡೆದಿದೆ.

20 ಲಕ್ಷಕ್ಕೂ ಅಧಿಕ ಹಜ್ ಯಾತ್ರಿಗಳಿಗೆ ಸೇವೆ ಸಲ್ಲಿಸುವುದಕ್ಕಾಗಿ ಹಜ್ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ನುಡಿದರು.

ಈ ಪೈಕಿ, 17,47,440 ಯಾತ್ರಿಗಳು ಈಗಾಗಲೇ ವಿದೇಶಗಳಿಂದ ಆಗಮಿಸಿದ್ದಾರೆ ಹಾಗೂ ಪ್ರಜೆಗಳು ಮತ್ತು ನಿವಾಸಿಗಳು ಸೇರಿದಂತೆ ಸೌದಿ ಅರೇಬಿಯದ 2 ಲಕ್ಷ ಯಾತ್ರಿಗಳೂ ಇಸ್ಲಾಮ್‌ನ ಅತ್ಯುನ್ನತ ಧಾರ್ಮಿಕ ವಿಧಿಯಲ್ಲಿ ಭಾಗವಹಿಸಲಿದ್ದಾರೆ.

ಹಜ್ ನಿಯಮಾವಳಿಗಳ ಯಾವುದೇ ಉಲ್ಲಂಘನೆಯನ್ನು ಪತ್ತೆಹಚ್ಚಲು ಪವಿತ್ರ ಸ್ಥಳಗಳ ಪ್ರವೇಶ ದ್ವಾರಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು. ಹಜ್ ಪರ್ಮಿಟ್‌ಗಳನ್ನು ಹೊಂದಿರದ 4 ಲಕ್ಷಕ್ಕೂ ಅಧಿಕ ಮಂದಿಯನ್ನು ವಾಪಸ್ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.

ಸರಿಯಾದ ಪರ್ಮಿಟ್‌ಗಳಿಲ್ಲದವರು ಚಲಾಯಿಸುತ್ತಿದ್ದ 2,08,236 ಕಾರುಗಳನ್ನು ವಾಪಸ್ ಕಳುಹಿಸಲಾಗಿದೆ ಹಾಗೂ ಮಕ್ಕಾ ಪ್ರವೇಶ ದ್ವಾರಗಳಲ್ಲಿ ಇನ್ನೂ 3,296 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಯಾತ್ರಿಗಳ ಪ್ರಯಾಣಕ್ಕಾಗಿ ಸಾವಿರಾರು ಬಸ್‌ಗಳ ನಿಯೋಜನೆ

19,500 ಬಸ್‌ಗಳು ಯಾತ್ರಿಕರನ್ನು ಮದೀನಾದಿಂದ ಮಕ್ಕಾಗೆ ಸಾಗಿಸಿವೆ ಹಾಗೂ 38,000 ಬಸ್‌ಗಳು ಇತರ ಸ್ಥಳಗಳಿಂದ ಯಾತ್ರಿಕರನ್ನು ಇತರ ಸ್ಥಳಗಳಿಂದ ಸಾಗಿಸಿವೆ. ಬಳಿಕ 9,000 ಬಸ್‌ಗಳು ಯಾತ್ರಿಗಳನ್ನು ಮಿನಾಕ್ಕೆ ಸಾಗಿಸಲಿವೆ ಎಂದು ಹಜ್ ಸಚಿವರ ಸಲಹಾಕಾರ ಹಾತಿಮ್ ಬಿನ್ ಹಸನ್ ಖಾದಿ ತಿಳಿಸಿದರು.

ಯಾತ್ರಿಕರಿಗಾಗಿ ಮಿನಾದಲ್ಲಿ ಶಿಬಿರಗಳು ಸಿದ್ಧಗೊಂಡಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News