ಸುಲಲಿತವಾಗಿ ನಡೆದ ‘ಸೈತಾನನಿಗೆ ಕಲ್ಲೆಸೆಯುವ’ ವಿಧಿ

Update: 2017-09-02 15:11 GMT

ಮಿನಾ (ಸೌದಿ ಅರೇಬಿಯ), ಸೆ. 2: ಐದು ದಿನಗಳ ಹಜ್ ವಿಧಿಯ ಕೊನೆಯ ಹಂತವಾದ ‘ಸೈತಾನನಿಗೆ ಕಲ್ಲೆಸೆಯುವ’ ಕಾರ್ಯಕ್ರಮ ಮಿನಾದಲ್ಲಿ ಸುಲಲಿತವಾಗಿ ನಡೆಯುತ್ತಿದೆ.

ಕೊನೆಯ ವಿಧಿಯನ್ನು ನಿರ್ವಹಿಸುವುದಕ್ಕಾಗಿ ಮುಸ್ಲಿಮ್ ಶ್ರದ್ಧಾಳುಗಳು ಜಮರಾತ್ ಸೇತುವೆಯಲ್ಲಿ ಹಾದು ಹೋಗುವಾಗ ಯಾವುದೇ ಆರೋಗ್ಯ ಅಥವಾ ಭದ್ರತಾ ಸಂಬಂಧಿ ಏರುಪೇರುಗಳಾಗಲಿಲ್ಲ.

ಈ ವರ್ಷದ ಹಜ್ ಶ್ರದ್ಧಾಳುಗಳ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ಸೌದಿ ಅರೇಬಿಯ ಹೇಳಿದೆ.

ಈ ಬಾರಿಯ ಹಜ್‌ನಲ್ಲಿ 23.5 ಲಕ್ಷಕ್ಕೂ ಅಧಿಕ ಶ್ರದ್ಧಾಳುಗಳು ಭಾಗವಹಿಸುತ್ತಿದ್ದಾರೆ ಎಂಬುದಾಗಿ ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಎಸ್‌ಪಿಎ ಗುರುವಾರ ವರದಿ ಮಾಡಿತ್ತು. ಈ ಪೈಕಿ 17.5 ಲಕ್ಷ ಮಂದಿ ಸೌದಿ ಅರೇಬಿಯದಿಂದ ಹೊರಗಿನವರು.

ಈ ಬಾರಿ ಮಿನಾದಲ್ಲಿ ಪ್ರಮುಖ ಆರೋಗ್ಯ ಅಥವಾ ಸುರಕ್ಷತಾ ವ್ಯತ್ಯಯಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಹರಿವನ್ನು ನಿಯಂತ್ರಿಸಿದ ಪೊಲೀಸರು

ಅಗಾದ ಸಂಖ್ಯೆಯ ಮುಸ್ಲಿಮ್ ಶ್ರದ್ಧಾಳುಗಳು ಪೊಲೀಸರ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ‘ಸೈತಾನನಿಗೆ ಕಲ್ಲೆಸೆಯುವ’ ವಿಧಿಯಲ್ಲಿ ಭಾಗವಹಿಸಿದರು. 41 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಯಾತ್ರಿಗಳ ಹರಿವನ್ನು ಪೊಲೀಸರು ನಿಯಂತ್ರಿಸುತ್ತಿದ್ದರು. ನೂಕು ನುಗ್ಗಲನ್ನು ತಿಳಿಯಲು ಎಲ್ಲೆಡೆಯೂ ಕ್ಯಾಮರಗಳನ್ನು ಹಾಕಲಾಗಿತ್ತು ಹಾಗೂ ಮೇಲೆ ಹೆಲಿಕಾಪ್ಟರ್‌ಗಳು ಸುತ್ತುತ್ತಿದ್ದವು.

‘ಕಲ್ಲೆಸೆಯುವ ವಿಧಿ’ ರವಿವಾರದವರೆಗೆ ಮುಂದುವರಿಯುತ್ತದೆ.

2015ರ ಭೀಕರ ಕಾಲ್ತುಳಿತ

ಸೈತಾನನಿಗೆ ಕಲ್ಲೆಸೆಯುವ ಹಜ್‌ನ ಅಂತಿಮ ವಿಧಿ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕ್ಕೆ ಆಹ್ವಾನ ನೀಡುವ ಹಂತವಾಗಿದೆ. ಇದಕ್ಕಾಗಿ ಜಮರಾತ್ ಸೇತುವೆಯಲ್ಲಿ ಜನ ಸಾಗರ ಹರಿದು ಹೋಗುವಾಗ ಕಾಲ್ತುಳಿತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.

2015ರಲ್ಲಿ ನಡೆದ ಕಾಲ್ತುಳಿತ ಹಜ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ಘಟನೆಯಾಗಿದೆ. ಸೆಪ್ಟಂಬರ್ 24ರಂದು ಮಿನಾದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 2,500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ 20 ವರ್ಷಗಳ ಅವಧಿಯಲ್ಲಿ ‘ಸೈತಾನನಿಗೆ ಕಲ್ಲೆಸೆಯುವ’ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ ಇನ್ನೂ ನೂರಾರು ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News