23.50 ಲಕ್ಷ ಮಂದಿಯಿಂದ ಹಜ್ ಯಾತ್ರೆ
ಮಿನಾ,ಸೆ.2: ಈ ವರ್ಷ ಒಟ್ಟು 23,52,122 ಮಂದಿ ಪವಿತ್ರ ಹಜ್ ಯಾತ್ರೆಯನ್ನು ನಿರ್ವಹಿಸಿದ್ದಾರೆಂದು ಸೌದಿ ಅರೇಬಿಯದ ಅಂಕಿಅಂಶಗಳ ಕುರಿತ ಮಹಾಪ್ರಾಧಿಕಾರ ತಿಳಿಸಿದೆ. ವಿದೇಶಗಳಿಂದ 17,52,024 ಮಂದಿ ಹಾಗೂ ಸೌದಿ ಆರೇಬಿಯದಿಂದ 6,00,108 ಮಂದಿ ಹಝ್ ಯಾತ್ರೆಗೆ ಆಗಮಿಸಿದ್ದರೆಂದು ಅದು ಹೇಳಿದೆ. ವಿದೇಶಿ ಹಜ್‌ಯಾತ್ರಿಕರ ಪೈಕಿ 16,48,332 ಮಂದಿ ವಿಮಾನ ಮಾರ್ಗವಾಗಿ ಹಾಗೂ 88,855 ಮಂದಿ ಭೂಮಾರ್ಗವಾಗಿ ಮತ್ತು 14,827 ಮಂದಿ ಹಡಗುಗಳಲ್ಲಿ ಆಗಮಿಸಿದ್ದರು. ಹಜ್ ಯಾತ್ರಿಕರ ದಟ್ಟಣೆಯನ್ನು ನಿಯಂತ್ರಿಸಲು ಭದ್ರತಾ ವ್ಯವಸ್ಥೆಯನ್ನು ಈ ವರ್ಷ ಇನ್ನಷ್ಟು ಬಲಪಡಿಸಲಾಗಿದ್ದು, ಮಿನಾ ಹಾಗೂ ಆಸುಪಾಸಿನ ಸ್ಥಳಗಳಲ್ಲಿ ಮೂರು ಲಕ್ಷ ಸೌದಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.
ಆಯ್ದ ಸೌದಿ ಪ್ರಜೆಗಳಿಗೆ ವಿಶೇಷವಾದ ತರಬೇತಿ ನೀಡಿ, ಅವರನ್ನು ಹಜ್ ಯಾತ್ರಿಕರ ದಟ್ಟಣೆಯನ್ನು ನಿಯಂತ್ರಿಸಲು ಬಳಸಿಕೊಳ್ಳಲಾಯಿತು. ಹಜ್ ಯಾತ್ರೆಯ ಪವಿತ್ರ ಸ್ಥಳಗಳಲ್ಲಿ ಯಾತ್ರಿಕರಿಗಾಗಿ 15 ಆಸ್ಪತ್ರೆಗಳಲ್ಲಿ ಒಟ್ಟು, 15 ಸಾವಿರ ಹಾಸಿಗೆಗಳು ಹಾಗೂ 550 ತೀವ್ರ ನಿಗಾ ಘಟಕಗಳ ಏರ್ಪಾಡು ಮಾಡಲಾಗಿತ್ತು. ಆಸ್ಪತ್ರೆಗಳ ಸನಿಹದಲ್ಲಿಯೇ 135 ಆರೋಗ್ಯ ಕೇಂದ್ರಗಳು ಕೂಡಾ ಕಾರ್ಯನಿರ್ವಹಿಸಿದ್ದವು.
ಅನುಮತಿ ಪತ್ರವಿಲ್ಲದೆ ಕಾನೂನು ಉಲ್ಲಂಘಿಸಿ ಹಜ್‌ಯಾತ್ರೆ ಕೈಗೊಂಡವರ ಸಂಖ್ಯೆಯಲ್ಲಿ, ಕಳೆದ ಮೂರು ರ್ಷಗಳಿಗಿಂತ ಈ ಸಲ ಗಣನೀಯ ಇಳಿಕೆಯಾಗಿದೆಯೆಂದು ಮಕ್ಕಾದ ಗವರ್ನರ್ ರಾಜಕುಮಾರ ಖಾಲಿದ್ ಅಲ್‌ಫೈಸಲ್ ತಿಳಿಸಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿರುವುದು ಹಾಗೂ ನಿಯಮ ಉಲ್ಲಂಘಿಸಿರುವವರ ವಿರುದ್ಧ ಕಠಿಣಕ್ರಮವನ್ನು ಕೈಗೊಳ್ಳುತ್ತಿರುವುದು ಇದಕ್ಕೆ ಪ್ರಮುಖ ಕಾರಣವೆಂದು ಅವರು ಹೇಳಿದ್ದಾರೆ.