ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಸಯ್ಯದ್ ಖಲೀಲ್ ಗೆ ಸ್ಥಾನ

Update: 2017-09-20 13:45 GMT

ದುಬೈ, ಸೆ.20: ಮಾನವೀಯ ಸೇವೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ಗಲ್ಫ್ ಮೂಲದ ಪ್ರಸಿದ್ಧ ಬಿಸಿನೆಸ್ ಮ್ಯಾಗಝೀನ್ ‘ಅರೇಬಿಯನ್ ಬಿಸಿನೆಸ್’, ‘ಯುಎಇಯ 100 ಪ್ರಭಾವಿ ವ್ಯಕ್ತಿ’ಗಳ ಪಟ್ಟಿಯಲ್ಲಿ ಭಟ್ಕಳದ ಪ್ರಭಾವೀ ನಾಯಕ, ಅತ್ಯಂತ ಜನಪ್ರಿಯ ಅನಿವಾಸಿ ಭಾರತೀಯ ಉದ್ಯಮಿಗಳಲ್ಲಿ ಒಬ್ಬರಾದ ಡಾ.ಎಸ್.ಎಂ. ಸಯ್ಯದ್ ಖಲೀಲುರ್ರಹ್ಮಾನ್ ರಿಗೆ ಸ್ಥಾನ ನೀಡಿದೆ.

ಈ ಪಟ್ಟಿಯಲ್ಲಿರುವ ಕೇವಲ 12 ಮಂದಿ ಭಾರತೀಯರಲ್ಲಿ ಸಯ್ಯದ್ ಖಲೀಲುರ್ರಹ್ಮಾನ್ ಕೂಡ ಒಬ್ಬರು. ತನ್ನ ಕಠಿಣ ಪರಿಶ್ರಮದಿಂದ ವೃತ್ತಿ ಜೀವನದ ಉನ್ನತ ಮಟ್ಟದಲ್ಲಿರುವ ಖಲೀಲುರ್ರಹ್ಮಾನ್ ಯುಎಇಯ ಪ್ರಮುಖ ಆರ್ಥಿಕ ಸಲಹೆಗಾರರಲ್ಲೊಬ್ಬರಾಗಿದ್ದಾರೆ.

ಭಟ್ಕಳ ಮೂಲದವರಾದ ಖಲೀಲುರ್ರಹ್ಮಾನ್ 1978ರಲ್ಲಿ ಗಲ್ಫ್ ರಾಷ್ಟಕ್ಕೆ ತೆರಳಿದ್ದರು. ಅಲ್ಲಿ ಸುಮಾರು 3  ದಶಕಗಳ ಕಾಲ ಗಲದಾರಿ ಫ್ಯಾಮಿಲಿ ಆ್ಯಂಡ್ ಗ್ರೂಪ್ ಆಫ್ ಕಂಪೆನೀಸ್ ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದ ಖಲೀಲುರ್ರಹ್ಮಾನ್, ಕಂಪೆನಿಯ ಕಾರ್ಯಚಟುವಟಿಕೆಗಳ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಸಲ್ಲಿಸಿದ ಗಣನೀಯ ಸೇವೆಯ ಹೊರತಾಗಿ ಖಲೀಲುರ್ರಹ್ಮಾನ್ ಯುಎಇಯಲ್ಲಿ ಆರ್ಥಿಕ ಸಲಹೆಗಾರರಾಗಿ ಗುರುತಿಸಿಕೊಂಡವರು. ಪ್ರಸ್ತುತ ಅವರು ಕೆ ಆ್ಯಂಡ್ ಕೆ ಎಂಟರ್ ಪ್ರೈಸ್ ನ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಂಗಳೂರಿನ ಮಾಧ್ಯಮ ಕಮ್ಯುನಿಕೇಷನ್ಸ್ ಲಿ. ಹಾಗೂ ಸಾಹಿಲ್ ಆನ್ ಲೈನ್ ಪೋರ್ಟಲ್ ನ ಅಧ್ಯಕ್ಷರಾಗಿದ್ದಾರೆ.

‘ಭಟ್ಕಳದ ಪ್ರಪ್ರಥಮ ಚಾರ್ಟರ್ಡ್ ಅಕೌಂಟಂಟ್ ಗಳಲ್ಲಿ ಒಬ್ಬರು’ ಎಂಬ ಹೆಗ್ಗಳಿಕೆಯ ಸಯ್ಯದ್ ಖಲೀಲ್ ಅವರು ಆರ್ಥಿಕ ತಜ್ಞರಾಗಿ ಮಾತ್ರವಲ್ಲದೆ , ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂಚೂಣಿಯ ನಾಯಕರಾಗಿ ಜನಪ್ರಿಯರಾಗಿದ್ದಾರೆ. ಭಟ್ಕಳದ ಪ್ರತಿಷ್ಠಿತ ಅಂಜುಮನ್ ಶಿಕ್ಷಣ ಸಂಸ್ಥೆಗಳು, ರಾಬಿತಾ ಸೊಸೈಟಿ ಇತ್ಯಾದಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಭಟ್ಕಳದ ಎಲ್ಲ ಸಮುದಾಯಗಳ ಜನರ ಅಪಾರ ಪ್ರೀತಿ , ಗೌರವಗಳಿಗೆ ಪಾತ್ರವಾಗಿರುವ ಖಲೀಲ್ ಸಾಹೇಬರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತುಂಬು ಪ್ರೋತ್ಸಾಹ ನೀಡಿ , ಶೈಕ್ಷಣಿಕ ಸಂಸ್ಥೆಗಳನ್ನು ಬೆಳೆಸಿದವರು. ದೇಶ ವಿದೇಶಗಳ ಪ್ರಭಾವಿ ರಾಜಕೀಯ ನಾಯಕರು, ಸಾಮಾಜಿಕ, ಧಾರ್ಮಿಕ ಧುರೀಣರು ಸಯ್ಯದ್ ಖಲೀಲ್ ಅವರ ಆಪ್ತ ವಲಯದಲ್ಲಿದ್ದಾರೆ.

ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಸಲ್ಲಿಸಲಾದ ಕೊಡುಗೆಗಾಗಿ ಈ ಹಿಂದೆಯೂ ಹಲವು ಬಾರಿ ಖಲೀಲುರ್ರಹ್ಮಾನ್ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ಅವರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಪ್ರದಾನಿಸಿ ಗೌರವಿಸಿದೆ. ಐರ್ಲ್ಯಾಂಡ್ ನ 'ಆಲ್ಡರ್ಸ್ ಗೇಟ್ ಕಾಲೇಜ್' ಖಲೀಲುರ್ರಹ್ಮಾನ್ ಅವರಿಗೆ ಡಾಕ್ಟರೇಟ್ ನೀಡಿದೆ.

‘ಅರೇಬಿಯನ್ ಬಿಸಿನೆಸ್’ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಭಾರತೀಯರಾದ ತುಂಬೆ ಗ್ರೂಪ್ ಅಧ್ಯಕ್ಷ ತುಂಬೆ ಮೊಹಿದ್ದೀನ್, ಡೆನುಬ್ ಗ್ರೂಪ್ ನ ಚೇರ್ ಮೆನ್ ಮತ್ತು ಸ್ಥಾಪಕ ರಿಝ್ವಾನ್ ಸಾಜನ್, ಲುಲು ಗ್ರೂಪ್ ನ ಅಧ್ಯಕ್ಷ ಯೂಸುಫ್ ಅಲಿ, ಅಸ್ದಾ ಬರ್ಸೆನ್-ಮರ್ಸ್ಟೆಲ್ಲಾ ಸಿಇಒ ಸುನಿಲ್ ಜಾನ್, ಎನ್ ಎಂ ಸಿ ಹೆಲ್ತ್ ಕೇರ್ ಸ್ಥಾಪಕ ಡಾ.ಬಿ.ಆರ್. ಶೆಟ್ಟಿ, ಪ್ಲ್ಯಾನ್ ಬಿ ಗ್ರೂಪ್ ಸಿಇಒ ಹಾಗೂ ಸ್ಥಾಪಕ ಹರ್ಮೀಕ್ ಸಿಂಗ್, ಕೊಕೂನ್ ಸೆಂಟರ್ ಫಾರ್ ಆಸ್ತಾಟಿಕ್ ಟ್ರಾನ್ಸ್ ಫಾರ್ಮೇಶನ್ ನ ಸಿಇಒ ಡಾ.ಸಂಜಯ್ ಪರಾಶನ್, ಲಸಿಕ್ ಶಸ್ತ್ರಚಿಕಿತ್ಸಕ ಡಾ. ಪ್ರಮೋದ್ ವಾರ್ ಹೇಕರ್, ವಿಪಿಎಸ್ ಹೆಲ್ತ್ ಕೇರ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಶಂಶೀರ್ ವಯಲಿಲ್ ಹಾಗೂ ಜೆಮ್ಸ್ ಎಜುಕೇಶನ್ ಚೇರ್ ಮೆನ್ ಸನ್ನಿ ವರ್ಕೀ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News