ವಿಶ್ವದ ಪ್ರಪ್ರಥಮ ಹಾರುವ ಟ್ಯಾಕ್ಸಿ ಸೇವೆ ದುಬೈಯಲ್ಲಿ ಆರಂಭವಾಗುವ ನಿರೀಕ್ಷೆ

Update: 2017-09-27 18:32 GMT

ಅಬುಧಾಬಿ, ಸೆ.27: ಮಹಾತ್ವಾಕಾಂಕ್ಷೆಯ ಹಾರುವ ಟ್ಯಾಕ್ಸಿ ವ್ಯವಸ್ಥೆಯ ಪರೀಕ್ಷಾ ಹಾರಾಟವನ್ನು ದುಬೈ ಸೋಮವಾರ ನಡೆಸಿದ್ದು, ಇದರೊಂದಿಗೆ ವಿಶ್ವದ ಪ್ರಪ್ರಥಮ ಡ್ರೋಣ್ ಟ್ಯಾಕ್ಸಿ ಸೇವೆಯ ಆರಂಭದ ನಿಟ್ಟಿನಲ್ಲಿ ಪ್ರಗತಿ ಸಾಧಿಸಿದಂತಾಗಿದೆ.

ಜರ್ಮನಿಯ ಡ್ರೋಣ್ ತಯಾರಿಕಾ ಸಂಸ್ಥೆ ತಯಾರಿಸಿರುವ ಸಣ್ಣ ಹೆಲಿಕಾಪ್ಟರ್ ಮಾದರಿಯ ವಾಹನದ ಕ್ಯಾಬಿನ್ ಎರಡು ಸೀಟುಗಳನ್ನು ಹೊಂದಿದ್ದು 18 ಪ್ರೊಪೆಲರ್‌ಗಳ (ಫ್ಯಾನ್‌ನಂತೆ ತಿರುಗುವ ವ್ಯವಸ್ಥೆ) ಸಹಾಯದಿಂದ ಹಾರುತ್ತದೆ. ಯಾವುದೇ ದೂರನಿಯಂತ್ರಕ ಸಾಧನದ ನೆರವಿಲ್ಲದೆ ಹಾರಾಡುವಂತೆ ವ್ಯವಸ್ಥೆಗೊಳಿಸಲಾಗಿದ್ದು 30 ನಿಮಿಷ ಹಾರಾಟ ನಡೆಸಬಲ್ಲದು. ಅಪಾಯದ ಸಂದರ್ಭದಲ್ಲಿ(ತುರ್ತು ಪರಿಸ್ಥಿತಿ ಸಂದರ್ಭ) ಬ್ಯಾಕ್ ಅಪ್ ಬ್ಯಾಟರಿಗಳು, ರೋಟರ್‌ಗಳು ಹಾಗೂ ಎರಡು ಪ್ಯಾರಾಚೂಟ್‌ಗಳನ್ನು ಈ ವಾಹನ ಹೊಂದಿರುತ್ತದೆ.

ಡ್ರೈವರ್ ರಹಿತ ವಿದ್ಯುತ್ ಕಾರು ಹಾಗೂ ಸಣ್ಣ ಹೆಲಿಕಾಪ್ಟರ್- ಇವೆರಡರ ಮಾದರಿಯ ಸುಧಾರಿತ ತಳಿಯಾಗಿರುವ ಹಾರುವ ಟ್ಯಾಕ್ಸಿಯ ಪ್ರಪ್ರಥಮ ಪರೀಕ್ಷಾ ಹಾರಾಟದ ಸಮಾರಂಭದಲ್ಲಿ ದುಬೈಯ ರಾಜಕುಮಾರ ಶೇಖ್ ಹಮ್‌ದನ್ ಬಿನ್ ಮುಹಮ್ಮದ್ ಉಪಸ್ಥಿತರಿದ್ದರು. ಸುಮಾರು 200 ಮೀಟರ್ ಎತ್ತರಕ್ಕೆ ಹಾರಿದ ವಾಹನ ಸುಮಾರು ಐದು ನಿಮಿಷ ಆಗಸದಲ್ಲಿ ಹಾರಾಟ ನಡೆಸಿತು.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಆ್ಯಪ್ ಮೂಲಕ ನಿಮಗೆ ಸಮೀಪ ಇರುವ ವೊಲೊಕಾಪ್ಟರ್(ಹಾರುವ ಟ್ಯಾಕ್ಸಿ) ಸೇವೆಗೆ ಕರೆ ನೀಡಿದರೆ ನೀವಿರುವಲ್ಲಿಗೇ ಬರುವ ಹಾರುವ ಟ್ಯಾಕ್ಸಿ ನೀವು ಹೋಗಬೇಕೆಂದಿರುವ ಸ್ಥಳಕ್ಕೆ ನಿಮ್ಮನ್ನು ಕರೆದೊಯ್ಯುವ ಸಂದರ್ಭ ಬರಲಿದೆ. ಈ ನಿಟ್ಟಿನಲ್ಲಿ ಸಂಶೋಧನೆ ಸಾಗುತ್ತಿದೆ ಎಂದು ಜರ್ಮನ್ ಡ್ರೋಣ್ ಕಂಪೆನಿಯ ಸಿಇಒ ಫ್ಲೋರಿಯನ್ ರಾಯ್ಟರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News