ಐಎಸ್ಎಫ್ ನೆರವಿನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿದ ಅರೀಫಾ ಸುಲ್ತಾನಾ

Update: 2017-09-30 17:47 GMT

ರಿಯಾದ್, ಸೆ. 30: ಸುಮಾರು ಒಂದು ವರ್ಷದ ಹಿಂದೆ ಬೆಂಗಳೂರು ಮೂಲದ ಅರೀಫಾ ಸುಲ್ತಾನಾ ಎಂಬವರು ಏಜೆಂಟಿನ ಮೂಲಕ ಬೇಬಿ ಸಿಟ್ಟರ್ ಕೆಲಸಕ್ಕೆಂದು ಸೌದಿ ಅರೆಬೀಯದ ಬುರೈದಕ್ಕೆ ಹೋಗಿದ್ದರು. ಆದರೆ ಸೌದಿ ಅರೇಬಿಯಾಕ್ಕೆ ಹೋದ ನಂತರ  ಇಲ್ಲಿಯ ಚಿತ್ರಣವೇ ಬೇರೆಯಾಗಿತ್ತು.

ವಾಸ್ತವವಾಗಿ ಏಜೆಂಟನು ಅರೀಫಾ ಸುಲ್ತಾನ ರಿಗೆ ಬೇಬಿ ಸಿಟ್ಟರ್ ಕೆಲಸವೆಂದು ಹೇಳಿ ವಂಚಿಸಿ, ಇಲ್ಲಿಯ ಸ್ಥಳೀಯ ಸೌದಿ ಪ್ರಜೆಯ ಮನೆಯಲ್ಲಿ ಮನೆಕೆಲಸ ಮಾಡಲು ಕಳುಹಿಸಿದ್ದ. ಇವರಿಗೆ ಹೇಳಿದ ಕೆಲಸವನ್ನು ನೀಡದೆ ಪ್ರಯೋಜಕನು ತನ್ನ ಮನೆ ಕೆಲಸದಲ್ಲಿಟ್ಟು, ಸರಿಯಾಗಿ ಆಹಾರ ಮತ್ತು ಔಷದಿಯನ್ನು ನೀಡದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದನು ಹಾಗೂ ಸ್ವದೇಶಕ್ಕೆ ಸಹ ಸಂಪರ್ಕಿಸಲು ಬಿಡದೆ ಗೃಹ ಬಂಧನದಲ್ಲಿರಿಸಿದನು ಎನ್ನಲಾಗಿದೆ.

 ಹೀಗೆ ಒಂದು ತಿಂಗಳ ಹಿಂದೆ ನಿರಂತರ ದೈಹಿಕ ಹಲ್ಲೆ ಮಾಡುತ್ತಿದ್ದ ಪ್ರಯೋಜಕನು ಕೊನೆಗೆ  ತನ್ನ ಮನೆಯಿಂದ ಹೊರ ಹಾಕಿ ಬೀದಿ ಪಾಲು ಮಾಡಿದ್ದು,  ಸೌದಿಯಲ್ಲಿ ಯಾರು ಪರಿಚಯ ಇಲ್ಲದ ಕಾರಣ ಸುಲ್ತಾನ  ಸ್ಥಿತಿಯು ಅತ್ಯಂತ ಶೋಚನೀಯವಾಗಿತ್ತು.

ಈ ಬಗ್ಗೆ ಮಾಹಿತಿ ಅರಿತ ಇಂಡಿಯನ್ ಸೋಷಿಯಲ್ ಫಾರಂ, ಕರ್ನಾಟಕ ರಾಜ್ಯ ಸಮಿತಿ  ಬುರೈದ ಘಟಕದ ಸದಸ್ಯರಾದ ಅಯಾಝ್ ಕಾಟಿಪಳ್ಳ ,ಖಾದರ್ ಅಡ್ಡೂರು  ಮತ್ತು ಇರ್ಫಾನ್ ಅಡ್ಡೂರು ಅವರು ಕಾರ್ಯಪ್ರವರ್ತರಾಗಿ ಅರೀಫಾ ಸುಲ್ತಾನಾ  ರನ್ನು ಭಾರತಕ್ಕೆ ಮರಳಿ ಕಳುಹಿಸಿಕೊಡುವ ಸಲುವಾಗಿ  ರಿಯಾದಿನಲ್ಲಿರುವ  ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಊರಿಗೆ ಕಳುಹಿಸಿಕೊಡುವ ಸಲುವಾಗಿ ಸಕಲ ದಾಖಲೆಗಳನ್ನು ತಯಾರಿಸಿದರು.

 ಎಲ್ಲಾ ದಾಖಲೆ ಪತ್ರಗಳನ್ನು ಸರಿಪಡಿಸಿದ ನಂತರ ಅಂತಿಮವಾಗಿ ಇಂಡಿಯನ್ ಸೋಷಿಯಲ್ ಫಾರಂನ ತಂಡವು ಭಾರತೀಯ ರಾಯಭಾರಿ ಕಚೇರಿಯ ನೆರವಿನೊಂದಿಗೆ ಬುರೈದದಿಂದ ಸುರಕ್ಷಿತವಾಗಿ  ಬೆಂಗಳೂರಿಗೆ ಕಳುಹಿಸಿ ಕೊಡುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News