ಸೌದಿ: ವಿವಿಯಿಂದ ಮಹಿಳೆಯರಿಗಾಗಿ ಡ್ರೈವಿಂಗ್ ಸ್ಕೂಲ್

Update: 2017-10-01 17:46 GMT

ರಿಯಾದ್,ಅ.1: ವಾಹನ ಚಾಲನೆಗೆ ಮಹಿಳೆಯರಿಗೆ ಅನುಮತಿ ನೀಡಿದ ಬಳಿಕ ಸೌದಿ ಆರೇಬಿಯದಲ್ಲಿ ಮಹಿಳೆಯರಿಗಾಗಿ ಡ್ರೈವಿಂಗ್ ಸ್ಕೂಲ್ ಆರಂಭಿಸುವುದಾಗಿ ಆ ದೇಶದ ಮಹಿಳಾ ವಿಶ್ವವಿದ್ಯಾನಿಲಯವೊಂದು ತಿಳಿಸಿದೆ.

ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಮಹಿಳೆಯರಿಗಾಗಿ ವಾಹನಚಾಲನಾ ತರಬೇತಿ ಶಾಲೆಯನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆಯೆಂದು ಪ್ರಿನ್ಸೆಸ್ ನೂರಾ ಮಹಿಳಾ ವಿಶ್ವವಿದ್ಯಾನಿಲಯವು ರವಿವಾರ ತಿಳಿಸಿದೆ.

 ಮುಂದಿನ ವರ್ಷದ ಜೂನ್‌ನಿಂದ ಜಾರಿಗೊಳ್ಳುವಂತೆ ಮಹಿಳೆಯರು ವಾಹನ ಚಾಲನಾ ಪರ್ಮಿಟ್‌ಗಳನ್ನು ಪಡೆಯುವುದಕ್ಕೆ ಅವಕಾಶ ನೀಡುವುದಾಗಿ ಸೌದಿ ಆರೇಬಿಯ ಕಳೆದ ಮಂಗಳವಾರ ತಿಳಿಸಿತ್ತು. ರಿಯಾದ್ ಮತ್ತಿತರ ನಗರಗಳಲ್ಲಿ 60 ಸಾವಿರಕ್ಕೂ ಅಧಿಕ ಮಹಿಳಾ ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದಾರೆಂದು ಪ್ರಿನ್ಸೆಸ್ ನೂರಾ ವಿಶ್ವವಿದ್ಯಾನಿಲಯವು ತಿಳಿಸಿದೆ.

ಸೌದಿ ಆಡಳಿತದ ನಿರ್ಧಾರದಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳಿಗೆ ತೆರಳುವ ಸಾಧ್ಯತೆಯಿದೆ ಹಾಗೂ ಕಾರು ಮಾರಾಟದಲ್ಲಿ ಭಾರೀ ಏರಿಕೆಯಾಗುವ ನಿರೀಕ್ಷೆಯಿದೆಯೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News